

ಚೆನ್ನೈ: ಮದ್ವೆಗೆ ಹೆಚ್ಚು ಮಂದಿಯನ್ನು ಕರೆಯೋ ಹಾಗಿಲ್ಲ, ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಹಾಕಬೇಕು, ಸ್ಯಾನಿಟೈಸರ್ ಹಚ್ಕೋಬೇಕು... ಇವೆಲ್ಲಾ ಮದುವೆಯ ನಿಯಮಗಳೇ ಬೇಡ ಎಂದುಕೊಂಡ ಚೆನ್ನೈನ ಜೋಡಿಯೊಂದು ಆಕಾಶದಲ್ಲಿ ಮದುವೆಯಾಗುವ ಮೂಲಕ ಭಾರಿ ಪ್ರಚಾರ ಪಡೆಯುತ್ತಿದ್ದಾರೆ.
ಭೂಮಿಯ ಮೇಲೆ ಕರೊನಾ ಇದೆ, ರೂಲ್ಸ್ ಇದೆ, ಅದಕ್ಕೇ ಭೂಮಿಯ ಸಹವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗುವ ಪ್ಲ್ಯಾನ್ ಮಾಡಿದೆವು ಎನ್ನುವ ಈ ಜೋಡಿ ಮಧುರೈ ನಿವಾಸಿಗಳಾದ ರಾಕೇಶ್-ದಕ್ಷಿಣಾ. ಅದಕ್ಕೆ ಇವರು ವಿಮಾನವನ್ನು ಕಾಯ್ದಿರಿಸಿ ಅದರಲ್ಲಿ ಮದುವೆಯಾಗಿದ್ದಾರೆ!
ಮಧುರೈ-ಬೆಂಗಳೂರಿನಿಂದ ಸಂಪೂರ್ಣ ವಿಮಾನವನ್ನು ಕಾಯ್ದಿರಿಸಿದ ಇವರ ಕುಟುಂಬಸ್ಥರು ವಿಮಾನದಲ್ಲಿ 161 ಮಂದಿ ಉಪಸ್ಥಿತಿಯಲ್ಲಿ ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದ ಮೇಲೆ ತಮ್ಮ ವಿಮಾನ ಸುಳಿದಾಡುವಾಗ ಮದುವೆಯಾಗಿದ್ದಾರೆ. ಈ ಮುಹೂರ್ತದಲ್ಲಿ ಅಲ್ಲಿದ್ದ ಬಂಧುಗಳು ಹೂವಿನ ಅರ್ಪಣೆ ಮಾಡುತ್ತಿದ್ದಂತೆ ವರ ವಧುವಿನ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ, ವಿಡಿಯೋದಲ್ಲಿ ಗಟ್ಟಿಮೇಳ ರೆಕಾರ್ಡ್ ಕೂಡ ಕೇಳಬಹುದಾಗಿದೆ.
ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿರುವ ಇವರ ವಿವಾಹದ ವಿಡಿಯೋ ಅನ್ನು ಸ್ನೇಹಿತರೊಬ್ಬರು ಶೇರ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗಿದೆ.