

ಝಾನ್ಸಿ (ಮಧ್ಯಪ್ರದೇಶ): ಕಾರಿನಲ್ಲಿ ಹೋಗುತ್ತಿರುವ ವೇಳೆ ಹಸುವೊಂದು ಅಡ್ಡ ಬಂದ ಕಾರಣ, ಅದನ್ನು ತಪ್ಪಿಸಲು ಹೋಗಿ ವೃದ್ಧ ದಂಪತಿ ಪ್ರಾಣ ಬಿಟ್ಟಿದ್ದಾರೆ. ಮಗನ ಜತೆ ಕಾರಿನಲ್ಲಿ ಹೋಗುತ್ತಿದ್ದ ಆತನ ಅಪ್ಪ- ಅಮ್ಮ ಅಪಘಾತದಲ್ಲಿ ಅಸುನೀಗಿರುವ ದಾರುಣ ಘಟನೆ ಇದಾಗಿದೆ.
ಯುವಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಝಾನ್ಸಿ-ಖಜುರಾಹೊ ರಸ್ತೆಯಲ್ಲಿ.
ಅಂಕುರ್ ಅಗರ್ವಾಲ್ ಎಂಬ 27 ವರ್ಷದ ಯುವಕ ತನ್ನ ತಂದೆ ಶಯಮ್ ಲಾಲ್ ಅಗರವಾಲ್ (70) ಮತ್ತು ತಾಯಿ ಮಂಜು (60) ಅವರನ್ನು ಕರೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಝಾನ್ಸಿ-ಖಜುರಾಹೊ ರಸ್ತೆಯಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ಜಿಲ್ಲಾ ಕೇಂದ್ರದಿಂದ 22 ಕಿಮೀ ದೂರದಲ್ಲಿರುವ ಬಿಲಹರಿ ಗ್ರಾಮದ ಬಳಿ ಅಪಘಾತ ಸಂಭವಿಸಿರುವುದಾಗಿ ನೌಗಾಂವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಜಯ್ ವೇದಿಯಾ ತಿಳಿಸಿದ್ದಾರೆ.
ಅಂಕುರ್ ಅವರು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಕಾರಿಗೆ ಏಕಾಏಕಿ ಹಸುವೊಂದು ಅಡ್ಡ ಬಂದಿದೆ. ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಡನ್ ಆಗಿ ಅಂಕುರ್ ಬ್ರೇಕ್ ಹಾಗಿದ್ದಾರೆ. ಕಾರು ಪಲ್ಟಿಯಾಗಿ ಬಿದ್ದುಬಿಟ್ಟಿದೆ. ಈ ಸಂದರ್ಭದಲ್ಲಿ ವೃದ್ಧ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಜಯ್ ತಿಳಿಸಿದ್ದಾರೆ. ಈ ಕುಟುಂಬ ಝಾನ್ಸಿಯಿಂದ ಛತ್ತರ್‌ಪುರದ ತಮ್ಮ ಮನೆಗೆ ಪ್ರಯಾಣಿಸುತ್ತಿತ್ತು ಎಂದು ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತಪಟ್ಟವನ್ನು ಕಾರಿನಿಂದ ಹೊರತೆಗೆದು ಗಾಯಾಳು ಅಂಕುರ್ನನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. (ಏಜೆನ್ಸೀಸ್)