ಕರೊನಾ ಬಂದಿದೆ, ಬದುಕಿರಲಾರೆ ಎಂದು ಪತ್ನಿಗೆ ಹೇಳಿ ಮನೆಬಿಟ್ಟವ ಇನ್ನೊಬ್ಬಳ ತೆಕ್ಕೆಯಲ್ಲಿ ಸಿಕ್ಕಿಬಿದ್ದ!

couple
Published on

ಮುಂಬೈ: ಪ್ರೀತಿಯ ಬಲೆಗೆ ಬಿದ್ದ ವಿವಾಹಿತನೊಬ್ಬ ಕರೊನಾದ ಹೆಸರು ಹೇಳಿಕೊಂಡು ಎಲ್ಲರ ಕಣ್ಣಿಗೆ ಮಣ್ಣೆರೆಚುವ ಯೋಜನೆ ರೂಪಿಸಿ ಇದೀಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಅಷ್ಟಕ್ಕೂ ಈತ ಮಾಡಿರುವ ಪ್ಲ್ಯಾನ್​ ಒಂದಲ್ಲಾ... ಎರಡಲ್ಲ...

28 ವರ್ಷದ ಮುಂಬೈನ ಈ ವ್ಯಕ್ತಿ ಬೈಕ್​ನೊಂದಿಗೆ ಕಲೆದ ಜುಲೈನಲ್ಲಿ ಮನೆ ಬಿಟ್ಟಿದ್ದ. ಆಮೇಲೆ ಪತ್ನಿಗೆ ಕರೆ ಮಾಡಿದ್ದ ಆತ, ತೀವ್ರವಾಗಿ ನೋವಿನಿಂದ ಹೇಳಿದ ಆತ, 'ನನಗೆ ಜೀವನವೇ ಬೇಸರವಾಗಿದೆ. ಕರೊನಾ ಬಂದಿದೆ. ನಾನಿನ್ನು ಬದುಕಿ ಪ್ರಯೋಜನ ಇಲ್ಲ ಎಂದಿದ್ದಾನೆ. ಹೆಂಡತಿ ಎಷ್ಟು ಸಮಾಧಾನ ಹೇಳಿದರೂ ಕೇಳದೇ ನಾನು ಸಾಯುವುದಕ್ಕೆ ಹೊರಟಿದ್ದೇನೆ ಎಂದು ಹೇಳಿ ಕರೆ ಕಟ್​ ಮಾಡಿದ್ದಾನೆ.

ದಿಗ್ಭ್ರಮೆಗೊಂಡ ಪತ್ನಿ ವಾಪಸ್​ ಕರೆ ಮಾಡಿದಾಗ ಅದು ಸ್ವಿಚ್​ ಆಫ್​ ಆಗಿತ್ತು. ಭಯದಿಂದ ಪತ್ನಿ ತನ್ನ ಅಣ್ಣನ ಬಳಿ ಸಹಾಯ ಕೇಳಿದಳು. ನಂತರ ನಾಪತ್ತೆ ಪ್ರಕರಣ ದಾಖಲು ಮಾಡಲಾಯಿತು.

ಪೊಲೀಸರು ತನಿಖೆ ಕೈಗೊಂಡಾದ ಗಂಡನ ಬೈಕ್, ಹೆಲ್ಮೆಟ್, ಬ್ಯಾಗ್, ಕೀ ರಸ್ತೆಯೊಂದರಲ್ಲಿ ಪತ್ತೆಯಾಗಿತ್ತು. ಎಲ್ಲವನ್ನೂ ಇಲ್ಲಿಯೇ ಬಿಟ್ಟು ಸಮೀಪದಲ್ಲಿ ಎಲ್ಲಿಯೋ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂದೇಹ ಬರುವಂತೆ ಮಾಡಲಾಗಿತ್ತು. ಆದರೆ ಎಷ್ಟು ಹುಡುಕಾಟ ನಡೆಸಿದರೂ ಪೊಲೀಸರಿಗೆ ಶವ ಪತ್ತೆಯಾಗಲಿಲ್ಲ. ಗಂಡನ ಸುಳಿವೂ ಸಿಗಲಿಲ್ಲ.

ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​ ವಿನಾಯಕ್ ಪ್ರಕರಣದ ತನಿಖೆ ಆರಂಭಿಸತೊಡಗಿದರು. ಸಿಸಿಟಿವಿ ಫುಟೇಜ್​ಗಳನ್ನು ನೋಡಿದರು. ಮೊಬೈಲ್ ಲೊಕೇಷನ್ ಟ್ರೇಸ್ ಮಾಡಲು ಎಲ್ಲ ರೀತಿಯ ಪ್ರಯತ್ನಪಟ್ಟರು.

ನಂತರ ಆತ ನಾಪತ್ತೆಯಾದ ಕೆಲ ದಿನಗಳ ನಂತರ ಅಪರಿಚಿತನೊಬ್ಬ ಪದೇ ಪದೇ 100ಕ್ಕೆ (ಪೊಲೀಸ್​ ಕಂಟ್ರೋಲ್​ ರೂಂ) ಕರೆ ಮಾಡಿ ಈ ನಾಪತ್ತೆ ಪ್ರಕರಣದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದದನ್ನು ಪೊಲೀಸರು ನೆನಪಿಸಿಕೊಂಡರು.

ಇದರಲ್ಲೇನೋ ಎಡವಟ್ಟು ಇದೆ ಎಂದುಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದರು. ಸಿಸಿಟಿವಿ ಫುಟೇಜ್​ ಹಾಗೂ ಮೊಬೈಲ್​ ಫೋನ್​ ಟ್ರೇಸ್​ ಮಾಡಿದಾಗ ಆತ ಒಂದು ಜಾಗದಲ್ಲಿ ಇರುವುದು ತಿಳಿದಿದೆ. ಅದು ಇಂದೋರ್​ನ ಲೊಕೇಷನ್​ ತೋರಿಸುತ್ತಿತ್ತು. ಅಲ್ಲಿಗೆ ಹೋಗಿ ಪೊಲೀಸರು ನೋಡಿದಾಗ ಈ ಪತಿರಾಯ ಇನ್ನೊಬ್ಬಳ ಜತೆ ಹಾಯಾಗಿ ಇರುವುದು ತಿಳಿದುಬಂದಿತು.

ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಈ ವಿವಾಹಿತ ಆಕೆಯ ಜತೆಯಲ್ಲಿ ಇರಲು ಕರೊನಾದ ನೆಪವೊಡ್ಡಿ ಎಸ್ಕೇಪ್​ ಆಗಿರುವುದು ತಿಳಿಯಿತು. ಇಬ್ಬರನ್ನೂ ಇದೀಗ ಮುಂಬೈಗೆ ವಾಪಸ್ ಕರೆತರಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಎಸಿಪಿ ವಿನಾಯಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net