ವಿರೋಧದ ನಡುವೆ ಮಂಡನೆಯಾಯ್ತು ಕೃಷಿ ಮಸೂದೆ: ಗಾಳಿಸುದ್ದಿಗಳಿಗೆ ಕಿವಿಕೊಡಬೇಡಿ ಎಂದ ಪ್ರಧಾನಿ

Modi
Published on

ನವದೆಹಲಿ: ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ನಡುವೆಯೂ ಇಂದು ಲೋಕಸಭೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳು ಅಂಗೀಕಾರಗೊಂಡವು. ಈ ಎರಡು ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕಾರ ಮಾಡಲಾಯಿತು.

ಅವುಗಳೆಂದರೆ: ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಹಾಗೂ ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ (ಸಬಲೀಕರಣ ಮತ್ತು ರಕ್ಷಣೆ) ಮಸೂದೆ.

ಆದರೆ ಈ ಮಸೂದೆಗೆ ಕಾಂಗ್ರೆಸ್‌, ಡಿಎಂಕೆ ಹಾಗೂ ರೆವಲೂಷನರಿ ಸೋಷಿಯಲಿಸ್ಟ್‌ ಪಾರ್ಟಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಈ ನಡುವೆಯೇ, ಮಸೂದೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಹಾರದಲ್ಲಿ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಈ ಮಸೂದೆ ಕುರಿತಂತೆ ಮಾತನಾಡಿದರು.

ಈ ಮಸೂದೆ ರೈತರಿಗೆ ಬಹಳ ರೀತಿಯಲ್ಲಿ ಅನುಕೂಲಕರ ಆಗಲಿದೆ. ಮಧ್ಯವರ್ತಿಗಳು ಹಾಗೂ ವಿವಿಧ ಸಮಸ್ಯೆಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮುಕ್ತಿ ನೀಡಲಿವೆ. ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ, ಸರ್ಕಾರವೇ ಕೃಷಿ ಉತ್ಪನ್ನಗಳ ಖರೀದಿಯಂತಹ ವ್ಯವಸ್ಥೆ ಮುಂದುವರಿಯಲಿವೆ. ಈ ಮಸೂದೆಗಳ ಪರಿಣಾಮ ರೈತರಿಗೆ ಇನ್ನೂ ಹಲವಾರು ಸೌಲಭ್ಯಗಳು, ಅನುಕೂಲಗಳು ದೊರೆಯಲಿವೆ ಎಂದು ಹೇಳಿದರು.

ಇದು ಕೃಷಿಯಲ್ಲಿ ರೈತರಿಗೆ ನೂತನ ಸ್ವಾತಂತ್ರ್ಯ ನೀಡುತ್ತದೆ. ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ ಎಂದು ಮೋದಿ ಹೇಳಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಹಾರದಲ್ಲಿ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಬಳಿಕ ಹೇಳಿಕೆ ನೀಡಿದ್ದಾರೆ. ಇನ್ನು ಇದೆ ವೇಳೆ ಮಸೂದೆಯನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ದಶಕಗಳಿಂದ ಈ ದೇಶವನ್ನು ಆಳಿದ ಜನರು ಈ ವಿಷಯದ ಬಗ್ಗೆ ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

ರೈಲು ತಡೆಗೆ ನಿರ್ಧಾರ: ಅದೇ ಇನ್ನೊಂದೆಡೆ, ಈ ಮಸೂದೆ ವಿರೋಧಿಸಿ ಸೆಪ್ಟೆಂಬರ್ 24ರಿಂದ 26ರವರೆಗೆ ರೈಲು ತಡೆ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆ ತಿಳಿಸಿದೆ.

ಇದು ರೈತರಿಗೆ ಸಹಾಯಕವಾಗಲಿದೆ ಎಂಬುದು ಸುಳ್ಳು. ಇದು ಜಾರಿಯಾದರೆ ಮುಂದೆ ನಾವು ಕಾರ್ಪೋರೇಟ್​ಗಳ ಕೈಗೊಂಬೆಯಾಗಬೇಕಾಗುತ್ತದೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಥೇರ್ ತಿಳಿಸಿದ್ದಾರೆ.

ರೈತ ವಿರೋಧಿ ಮಸೂದೆ ವಿರೋಧಿಸಿ ಸೆಪ್ಟೆಂಬರ್ 25ರಂದು ವಿವಿಧ ರೈತಪರ ಸಂಘಟನೆಗಳು ಪಂಜಾಬ್ ಬಂದ್ ಗೆ ಕರೆ ನೀಡಿವೆ.

ಮಸೂದೆ ಅಂಗೀಕಾರಕ್ಕೆ ಬಿಜೆಪಿ ಮುಂದಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಮಿತ್ರಪಕ್ಷ ಶಿರೋಮಣಿ ಅಕಾಲಿದಳದ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ತಮ್ಮ ಸ್ಥಾನಕ್ಕೆ ಪಕ್ಷದ ರಾಜೀನಾಮೆ ನೀಡಿದ್ದು, ಅದನ್ನು ರಾಷ್ಟ್ರಪತಿ ಅಂಗೀಕಾರ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net