ದೇವಮಾನವನ ಸಂಬಂಧಿ ಮದುವೆಯಲ್ಲಿ ಶೂಟ್‌ಔಟ್‌- ಸರಪಂಚ್‌ ಸಾವು: ಜೈ ಶ್ರೀರಾಮ್‌ ಎಂದು ಕೂಗಿದವರಾರು?

shootout
Published on

ಭೋಪಾಲ್​: ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಂದೂಕು ಹಿಡಿದು ಬಂದವರು ಎರ್ರಾಬಿರ್ರಿಯಾಗಿ ಗುಂಡು ಹೊಡೆದಿರುವ ಭಯಾನಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಐದು ಮಂದಿಯ ಕೊಲೆ ಮಾಡಿ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ರಾಂಪಾಲ್​ ಬೆಂಬಲಿಗರ ಮದುವೆ ನಡೆಯುತ್ತಿತ್ತು ಎನ್ನಲಾಗಿದೆ. ಹರಿಯಾಣದ ರಾಂಪಾಲ್‌ ಮಗು ಸೇರಿ ಐವರು ಮಹಿಳೆಯರ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿ ಇದ್ದಾನೆ. ಈ ಮದುವೆಯನ್ನು ಕಾನೂನು ಬಾಹಿರವಾಗಿ ಆಯೋಜಿಸಲಾಗಿದೆ ಎಂದು ಆರೋಪಿಸಿ, ಶಸ್ತ್ರಗಳೊಂದಿಗೆ ಬಂದ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮದುವೆ ವಿರೋಧಿಸಿ ಪ್ರತಿಭಟನೆ ಕೂಡ ನಡೆದಿದ್ದವು.

ನಮ್ಮ ಪಂಗಡದಲ್ಲಿ 17 ನಿಮಿಷದಲ್ಲಿ ಈ ಮದುವೆಗಳು ನಡೆಯುತ್ತವೆ. ಆದರೆ ಇಂಥ ವಿವಾಹಗಳು ಹಿಂದೂ ಧರ್ಮಕ್ಕೆ ವಿರೋಧ ಎಂದು ದಾಳಿ ಮಾಡಲಾಗಿದೆ ಎಂದು ರಾಂಪಾಲ್‌ ಅನುಯಾಯಿಗಳು ಆರೋಪಿಸುತ್ತಿದ್ದಾರೆ. ಆದ್ದರಿಂದಲೇ ದಾಳಿಯ ವೇಳೆ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಲಾಗಿದೆ. ಆದ್ದರಿಂದ ಬಲಪಂಥೀಯರು ಈ ದಾಳಿ ನಡೆಸಿದ್ದಾರೆ ಎನ್ನುವುದು ಅವರ ಆರೋಪ. ಆದರೆ ಈ ಘೋಷಣೆ ಕೂಗಲಾಗಿತ್ತೆ? ಕೂಗಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಈ ದಾಳಿಯ ವಿಡಿಯೋ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ದಾಳಿಕೋರರು ನುಗ್ಗುತ್ತಿದ್ದಂತೆಯೇ ಜನರು ಭಯದಿಂದ ಓಡಿಹೋಗುತ್ತಿರುವುದನ್ನು ನೋಡಬಹುದಾಗಿದೆ. ಮಾಜಿ ಸರ್​ಪಂಚ್​ ದೇವಿಲಾಲ್​ ಮೀನಾ ಅವರಿಗೆ ಗುಂಡು ತಗುಲಿ ಅಸುನೀಗಿದ್ದಾರೆ. ನಂತರ ದಾಳಿಕೋರರನ್ನು ಅತಿಥಿಗಳೇ ಹಿಮ್ಮೆಟ್ಟಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಘಟನೆಗೆ ಸಂಬಂಧಿಸಿದಂತೆ 11 ಮಂದಿ ವಿರುದ್ಧ ಕೇಸ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net