

ಮುಂಬೈ: ಸಿನಿ ರಂಗದಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಇದಾಗಲೇ ಹಲವಾರು ನಟ-ನಟಿಯರು ಬಾಯಿ ಬಿಟ್ಟಿದ್ದು, ಇದೀಗ ನಟಿ ಮಲ್ಲಿಕಾ ಶೆರಾವತ್ ಸರದಿ. ಮೈಚಳಿ ಬಿಟ್ಟು ನಟಿಸುವ ಮೂಲಕ ಸಕತ್ ಹಾಟ್ ತಾರೆ ಎಂದೇ ಪ್ರಸಿದ್ಧಿ ಪಡೆದಿರುವ ಮಲ್ಲಿಕಾ ಇದೀಗ ಬಾಲಿವುಡ್ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಟಾಪ್ ಹೀರೋಗಳ ಮೇಲೆಯೂ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂಧಾನಕ್ಕೆ ಒಪ್ಪಿಕೊಳ್ಳದಿದ್ದಕ್ಕೆ ಸಾಕಷ್ಟು ಸಿನಿಮಾಗಳಿಂದ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು ಎಂದಿದ್ದಾರೆ ನಟಿ.ಒಬ್ಬ ಹೀರೋ ನಿಮಗೆ ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರಲು ಹೇಳುತ್ತಾನೆ. ಆತನ ಜೊತೆ ನೀವು ಸಿನಿಮಾ ಮಾಡುತ್ತಿರುತ್ತೀರಿ. ಅವರದೇ ಸರ್ಕಲ್ನಲ್ಲಿ ಇರುತ್ತೀರಿ. ಆತ ಮಧ್ಯರಾತ್ರಿ ಕರೆದಾಗ ನೀವು ಹೋಗದಿದ್ದರೆ ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ ಎಂದಿದ್ದಾರೆ.
ನಾನು ಹಲವಾರು ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದೇನೆ. ಹಾಗೆಂದು ಮಂಚದ ವಿಷಯದಲ್ಲಿ ನಾನು ರಾಜಿ ಆಗುತ್ತೇನೆ ಎಂದು ಅರ್ಥವಲ್ಲ. ಎಲ್ಲ ಎ ದರ್ಜೆಯ ನಟರು ನನ್ನೊಂದಿಗೆ ನಟಿಸಲು ನಿರಾಕರಿಸುತ್ತಾರೆ. ಯಾಕೆಂದರೆ ನಾನು ಅವರೊಂದಿಗೆ ರಾಜಿ ಆಗಲಿಲ್ಲ. ಯಾವ ನಟಿಯನ್ನು ತಾವು ಕಂಟ್ರೋಲ್ ಮಾಡಬಹುದು, ಯಾವ ನಟಿ ತಮ್ಮೊಂದಿಗೆ ರಾಜಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅಂಥವರನ್ನು ಹೀರೋಗಳು ಇಷ್ಟಪಡುತ್ತಾರೆ. ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ನಾನು ಇನ್ನೊಬ್ಬರ ಲೈಂಗಿಕಾಸಕ್ತಿಯ ವಿಷಯವಾಗಲು ಬಯಸುವುದಿಲ್ಲ ಎಂದು ಮಲ್ಲಿಕಾ ಹೇಳಿದ್ದಾರೆ.
ಅಂದಹಾಗೆ, 2002ರಲ್ಲಿ ಮಲ್ಲಿಕಾ ಶೆರಾವತ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 2004ರ ‘ಮರ್ಡರ್’ ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು. ಜೋಗಿ ಪ್ರೇಮ್ ಅವರ 'ಈ ಪ್ರೀತಿ ಏಕೆ ಭೂಮಿ ಮೇಲಿದೆ..' ಚಿತ್ರದ ಐಟಂ ಸಾಂಗ್‌ನಲ್ಲೂ ಮಲ್ಲಿಕಾ ಹೆಜ್ಜೆ ಹಾಕಿದ್ದರು. 2011ರ ನಂತರ ಮಲ್ಲಿಕಾ ಅವರ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಾ ಹೋಯಿತು. ಈ ಮಧ್ಯೆ ಅವರು ಚೈನೀಸ್, ಹಾಲಿವುಡ್ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಅವರಿಗೆ ಈಗ 45 ವರ್ಷ ವಯಸ್ಸು. ಈಗ ಅಷ್ಟೇನೂ ಬೇಡಿಕೆ ಇಲ್ಲ. ಕಳೆದ 10 ವರ್ಷಗಳಲ್ಲಿ ಅವರು ನಟಿಸಿರುವುದು ಬರೀ 7 ಸಿನಿಮಾಗಳಲ್ಲಿ ಮಾತ್ರ.
ನಾನು ಸಾಧ್ಯವಾದಷ್ಟು ಒಳ್ಳೆಯ ಪಾತ್ರಗಳನ್ನು ಹುಡುಕಲು ಪ್ರಯತ್ನಿಸಿದೆ. ಎಲ್ಲರೂ ಮಾಡುವಂತೆ ನಾನು ಕೂಡ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ಪಾತ್ರಗಳು ಚೆನ್ನಾಗಿದ್ದವು, ಕೆಲವು ಚೆನ್ನಾಗಿಲ್ಲ. ಇದು ನಟ-ನಟಿಯ ಪ್ರಯಾಣದ ಭಾಗವಾಗಿದೆ, ಆದರೆ ಒಟ್ಟಾರೆಯಾಗಿ ನನ್ನ ಜರ್ನಿ ಅದ್ಭುತವಾಗಿದೆ ಎಂದು ಮಲ್ಲಿಕಾ ಹೇಳಿದ್ದಾರೆ. (ಏಜೆನ್ಸೀಸ್)