ವಿಚ್ಛೇದನದ ವೇಳೆ ಏನೂ ಬೇಡ ಎಂದ ಪತ್ನಿ, ನಂತರ ದುಡ್ಡಿಗೆ ಪೀಡಿಸಿದರೆ ಗಂಡ ಕೊಡಲೇಬೇಕಾ? ಕೇಸ್‌ ಹಾಕ್ಬೋದಾ?

nyayadevate1
Published on
ನಾನು ಒಬ್ಬ ಸರ್ಕಾರಿ ನೌಕರ. ನಾನು ನನ್ನ ಹೆಂಡತಿಯಿಂದ ಫೆಬ್ರವರಿ 2019 ರಲ್ಲಿ ವಿಚ್ಛೇದನ ಪಡೆದಿರುತ್ತೇನೆ. ನ್ಯಾಯಾಲಯವು ನನ್ನ ಮಗಳ ವಿದ್ಯಾಭ್ಯಾಸದ ವೆಚ್ಚ ಭರಿಸುವುದಾಗಿ ತಿಳಿಸಿತ್ತು .
ಆದರೆ ನನ್ನ ವಿಚ್ಛೇದಿತ ಹೆಂಡತಿ ಅವಳ ಪ್ರೇಮಿಯನ್ನು ಮದುವೆಯಾಗುತ್ತಿದ್ದೇನೆ, ನೀನು ಯಾವುದೇ ರೀತಿ ಮಗುವಿನ ವೆಚ್ಚ ಕೊಡಬೇಡ ಮತ್ತು ನೋಡಲು ಬರಬೇಡ ಅಂತ ಹೇಳಿದ್ದರು. ಆದರೆ ಕಳೆದ ಮಾರ್ಚ್‌ನಲ್ಲಿ 48000 ರೂ ನ ಬಿಲ್ ಕಳಿಯಿಸಿ ಹಣ ಕೊಡುವಂತೆ ಹೇಳಿದಳು.. ಇಲ್ಲದಿದ್ದರೆ ನನ್ನ ಮೇಲೆ ಮೊಕದ್ದಮೆ ಹೂಡುವುದಾಗಿ ಹೇಳಿದಳು ಮತ್ತು ಅಷ್ಟು ಹಣವನ್ನು ಒಮ್ಮೆಲೇ ಕೊಡುವಂತೆ ಹೇಳಿದಳು.

ನಾನು ಹಣ ಕೊಟ್ಟೆ. ನೀನು ಮುಂದೆ ಹಣವನ್ನು ಕೊಡುವುದು ಬೇಡ ಅಂತ ಹೇಳಿದಳು. ಆದರೆ ಈಗ ಮತ್ತೆ ಹಣವನ್ನು ಕೊಡುವಂತೆ ಹೆದರಿಸುತ್ತಿದ್ದಾಳೆ, ಅವಳು ನೀಡುತ್ತಿರುವ ಬಿಲ್ ಗಳು ನ್ಯಾಯ ಸಮ್ಮತವಾಗಿಲ್ಲ..ಅದನ್ನ ಕೇಳಿದರೆ ಮೊಕದ್ದಮೆ ಹೂಡುವುದಾಗಿ ಹೇಳುತ್ತಿದ್ದಾಳೆ. ಮತ್ತು ಒಮ್ಮೆಲೇ ಹಣವನ್ನು ಕೊಡುವಂತೆ ಕೇಳುತ್ತಿದ್ದಾಳೆ. ನನ್ನ ಸಂಬಳದಿಂದ ಅಷ್ಟು ಹಣವನ್ನು ಭರಿಸಲು ಆಗುತ್ತಿಲ್ಲ.. ನನ್ನನ್ನು ಈ ರೀತಿ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದರಿಂದ ಅವಳ ಮೇಲೆ ನಾನು ಕೇಸ್ ದಾಖಲಿಸಬಹುದೆ...ಎಂದು ತಿಳಿಸಿ

ಉತ್ತರ: ನ್ಯಾಯಾಲಯದಲ್ಲಿ ಮಗುವಿನ ವಿದ್ಯಾಭ್ಯಾಸಕ್ಕೆಂದು ನೀವು ಇಂತಿಷ್ಟು ಹಣ ಕೊಡಬೇಕು ಎಂದು ಆದೇಶ ಆಗಿದ್ದರೆ ಅಷ್ಟನ್ನು ನೀವು ಕೊಡಲೇ ಬೇಕಾಗುತ್ತದೆ. ಆಕೆ ಬಾಯಿ ಮಾತಿನಲ್ಲಿ ಬೇಡ ಎಂದು ಹೇಳಿದರೂ, ನ್ಯಾಯಾಲಯದ ಆದೇಶವನ್ನು ನೀವು ಪಾಲಿಸಲೇ ಬೇಕಾಗುತ್ತದೆ.

ಅದನ್ನು ಕೊಡದೇ, ಆಕೆ ನಿಮ್ಮನ್ನು ಹಣ ಕೇಳಿದಾಗ ನೀವು ಆಕೆಯ ವಿರುದ್ಧ ಕೇಸು ದಾಖಲಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ನ್ಯಾಯಾಲಯದಲ್ಲಿ ಇಂತಿಷ್ಟೇ ಹಣ ಎಂದು ನಿಗದಿ ಪಡಿಸದೆ, ಮಗುವಿನ ವಿದ್ಯಾಭ್ಯಾಸದ ಖರ್ಚು ಎಂದು ಮಾತ್ರ ಆಗಿದ್ದರೆ, ಆಗ ನೀವು ಮಗುವಿನ ಶಾಲೆಗೆ, ವ್ಯಾನಿಗೆ ...ಟ್ಯೂಷನ್‌ ವಗೈರೆಗೆ ಹಣವನ್ನು ನೇರವಾಗಿ ಕಟ್ಟಬಹುದು. ನಿಮ್ಮ ಪತ್ನಿ ಕೊಡುತ್ತಿರುವ ಬಿಲ್ಲುಗಳ ಬಗ್ಗೆ ನಿಮಗೆ ಅನುಮಾನವಿದ್ದರೆ ಅದರ ಸಿಂಧುತ್ವವನ್ನು ಕೇಳಿ ನೋಟೀಸು ಕೊಟ್ಟು , ವಿವರಣೆ ಪಡೆಯಿರಿ.

ನೀವು ಹಣ ಕೊಡದೇ ಹೋದರೆ, ನಿಮ್ಮ ಮೇಲೆ ಆಕೆ ಮೊಕದ್ದಮೆ ಹಾಕಬಹುದು ಎನ್ನುವುದನ್ನು ಮರೆಯ ಬೇಡಿ. ನಿಮ್ಮ ಸಂಬಳದ ಮೇಲೆ ಅಟ್ಯಾಚ್ಮೆಂಟನ್ನೂ ತರಬಹುದು ಎನ್ನುವುದೂ ನೆನಪಿರಲಿ. ಹಾಗೂ ನೀವು ಕೊಡುತ್ತಿರುವ ಹಣ ನಿಮ್ಮ ಮಗುವಿಗೇ ಎನ್ನುವುದನ್ನೂ ನೆನಪಿನಲ್ಲಿಟ್ಟುಕೊಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net