ರಕ್ತನಾಳದ ತುಂಬೆಲ್ಲಾ ಬೆಳೆಯಿತು ವಿಚಿತ್ರ ‘ಮ್ಯಾಜಿಕ್‌’ ಅಣಬೆಗಳು! ಚಿಕಿತ್ಸೆ ನೀಡಿದ ವೈದ್ಯರೇ ಸುಸ್ತು!

mashroonm
Published on

ವಾಷಿಂಗ್ಟನ್‌: ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಘಟನೆಗಳು ನಡೆಯುತ್ತವೆ, ಅದೇ ರೀತಿ ಚಿತ್ರ-ವಿಚಿತ್ರ ಸ್ವಭಾವದ ವ್ಯಕ್ತಿಗಳೂ ಇರುತ್ತಾರೆ.

ಅಂಥದ್ದೇ ಒಬ್ಬ ವಿಚಿತ್ರ ವ್ಯಕ್ತಿಯಿಂದಾಗಿ ವಿಚಿತ್ರ ಘಟನೆ ನಡೆದಿದ್ದು, ಈ ವಿಚಿತ್ರ ನೋಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಯುವಕನೊಬ್ಬನ ರಕ್ತನಾಳದ ಕಣಕಣದಲ್ಲಿಯೂ ಅಣಬೆ ಬೆಳೆದಿರುವ ಘಟನೆ ಇದಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಬೈಪೋಲಾರ್ ಡಿಸಾರ್ಡರ್‌ ಎಂಬ ಮಾನಸಿಕ ವ್ಯಾಧಿಗೆ ಈ ಯುವಕ ಒಳಗಾಗಿದ್ದ. ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಯುವನಿಗೆ ಹುಷಾರಾಗಿರಲಿಲ್ಲ. ಅದ್ದರಿಂದ ಯಾರೋ ಒಬ್ಬರು ಆತನಿಗೆ ವಿಚಿತ್ರ ಸಲಹೆ ನೀಡಿದರು. ಅದೇನೆಂದರೆ ಸೈಕೆಡೆಲಿಕ್ ಜಾತಿಗೆ ಸೇರಿರುವ ಅಣಬೆಗಳಿಂದ ತಯಾರಿಸಿದ ಚಹಾದೊಂದನ್ನು ಚುಚ್ಚುಮದ್ದಿನ ಮೂಲಕ ಶರೀರದೊಳಕ್ಕೆ ಹಾಕಿಕೊಂಡರೆ ಈ ವ್ಯಾಧಿ ಗುಣವಾಗುತ್ತದೆಯೆಂದು.

ಅದನ್ನು ನಂಬಿದ ಈ ಯುವಕ ಹಾಗೆಯೇ ಮಾಡಿದ್ದಾನೆ. ಅದಾದ ಸ್ವಲ್ಪ ದಿನಗಳಲ್ಲಿಯೇ ವಿಪರೀತ ಸುಸ್ತಿನಿಂದ ಬಳಲಿ ಬೆಂಡಾಗಿ ಹೋಗಿದ್ದಾನೆ. ಸ್ವಲ್ಪ ಅವಧಿಯಲ್ಲಿಯೇ ಆತನ ಅಂಗಾಂಗ ವೈಫಲ್ಯ ಶುರುವಾಯಿತು. ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಕಾಮಾಲೆ, ಅತಿಸಾರ, ಆಯಾಸ, ವಾಕರಿಕೆ ಶುರುವಾಗಿ ರಕ್ತವನ್ನೂ ವಾಂತಿಯನ್ನೂ ಮಾಡಿಕೊಂಡ. ಈತನನ್ನು ಪರೀಕ್ಷೆ ಮಾಡಿದ ವೈದ್ಯರು ದಂಗಾಗಿ ಹೋದರು. ಏಕೆಂದರೆ ಈತನ ರಕ್ತನಾಳಗಳಲ್ಲಿ ವಿಚಿತ್ರ ರೀತಿಯ ಅಣಬೆಗಳು ಕಂಡುಬಂದವು.

ನಂತರ ಎಲ್ಲಾ ವಿಷಯಗಳನ್ನು ವೈದ್ಯರಿಗೆ ಈತ ಹೇಳಿದ್ದಾನೆ. ಮ್ಯಾಜಿಕ್‌ ಅಣಬೆಯನ್ನು ತಾನು ಇಂಜೆಕ್ಷನ್‌ ಟ್ಯೂಬ್‌ ಮೂಲಕ ಇಂಜೆಕ್ಟ್‌ ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ. ಈತ ಬದುಕುಳಿಯುವ ಸಾಧ್ಯತೆಯೇ ಕಡಿಮೆ ಎಂದುಕೊಂಡಿದ್ದ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಸದ್ಯ ಯುವಕ ಬದುಕುಳಿಯುವ ಭರವಸೆಯನ್ನು ವೈದ್ಯರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net