

ಅಂದಿನಿಂದ ನಾನು ಮನೆಯಲ್ಲಿಯೇ ಇದ್ದೇನೆ. ಕೆಲಸವನ್ನು ಹುಡುಕುತ್ತಿದ್ದೇನೆ. ಮನೆಯಲ್ಲಿಯೇ ಇರುವುದರಿಂದ ಮನೆಯ ಅಷ್ಟೂ ಕೆಲಸಗಳನ್ನು ನಾನೇ ಮಾಡುತ್ತಿದ್ದೇನೆ. ಸುಖವಾಗಿಯೇ ಇದ್ದ ನಮ್ಮ ಸಂಸಾರದಲ್ಲಿ ಇತ್ತೀಚೆಗೆ ಬಿರುಕು ಕಾಣಿಸುತ್ತಿದೆ. ನನ್ನ
ಹೆಂಡತಿಯ ವರ್ತನೆಗಳೇ ಬದಲಾಗುತ್ತಿದೆ. ನಾನು ಪ್ರೀತಿಯಿಂದ ಮನೆಗೆಲಸಗಳನ್ನು ಮಾಡಿಕೊಟ್ಟರೆ ಅದನ್ನವಳು `ತನ್ನ ಹಕ್ಕು' ಎನ್ನುವಂತೆ ವರ್ತಿಸತೊಡಗಿದ್ದಾಳೆ. ಮನೆಗೆಲಸದ ಹುಡುಗಿಯನ್ನು ಬಿಡಿಸಿದ್ದಾಳೆ.
ಆದರೂ ನನ್ನ ಹೆಂಡತಿಗೆ ಸಮಾಧಾನವೇ ಇಲ್ಲ. ಒಳ ಉಡುಪುಗಳನ್ನಾದಿಯಾಗಿ ಬಚ್ಚಲುಮನೆಯಲ್ಲಿಯೇ ಎಸೆದು ಹೋಗಿರುತ್ತಾಳೆ. ಇದು ಯಾವ ವಿಚಾರಕ್ಕೂ ನಾನು ಏನೂ ಹೇಳುವಂತಿಲ್ಲ. ಚುಚ್ಚು ಮಾತುಗಳನ್ನಾಡಿ ಹಂಗಿಸುತ್ತಾಳೆ. ಮೊನ್ನೆ ಮನೆಗೆ ಬಂದಿದ್ದ
ಬಂಧುಗಳೊಬ್ಬರ ಮುಂದೆಯೂ ನನ್ನನ್ನು ಹೀಯಾಳಿಸಿದ್ದು, ಅದು ಊರಲ್ಲಿರುವ ನನ್ನ ಹೆತ್ತವರಿಗೆ ತಿಳಿದು ಅವರೆಲ್ಲ ತುಂಬ
ನೊಂದುಕೊಂಡಿದ್ದಾರೆ. ನನಗಂತೂ ತುಂಬ ಮುಜುಗರವಾಗುತ್ತಿದೆ.
ಇದು ಹೀಗೇ ಮುಂದುವರಿದರೆ ನನ್ನ ಆತ್ಮಗೌರವಕ್ಕೇ ಧಕ್ಕೆಯಾಗುವುದಿಲ್ಲವೇ? ಹೇಗೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು?
ನಿಮ್ಮ ಮಾತು ನಿಜ. ಅವಮಾನಗಳು ಮಾನಸಿಕ ಹಿಂಸೆಗಳೇ. ಗಂಡನಾಗಲಿ, ಹೆಂಡತಿಯಾಗಲೀ, ತನ್ನ ಸಂಗಾತಿಯನ್ನು ಹೀಗೆ ಹಿಂಸಿಸಿದರೆ ಅದನ್ನು ತಡೆದುಕೊಳ್ಳುವುದು ಕಷ್ಟವೇ. ಅದರಲ್ಲೂ ಬಂಧುಗಳ ಮುಂದೆಯೂ ನಿಮ್ಮ ಹೆಂಡತಿ ನಡೆದುಕೊಂಡ ರೀತಿ ಖಂಡಿತ ಸರಿಯಲ್ಲ. ಬಹುಶಃ ಅದಕ್ಕೆ ಕಾರಣ ಆಕೆಯ ಚಿಂತನಾಕ್ರಮ.
ಎಷ್ಟೇ ವಿದ್ಯಾವಂತರಾದರೂ ನಮ್ಮ ಭಾರತೀಯರು ಪರಂಪರಾಗತವಾಗಿ ಇರುವ ಸ್ಥಾಪಿತ ಮೌಲ್ಯಗಳನ್ನೇ ಗಟ್ಟಿಯಾಗಿ ನಂಬಿಕೊಂಡು ಬಿಟ್ಟಿರುತ್ತಾರೆ. ಉದಾಹರಣೆಗೆ `ಉದ್ಯೋಗಂ ಪುರುಷ ಲಕ್ಷಣಂ' ಎನ್ನುವುದು ಒಂದು. ಇತ್ತೀಚೆಗಂತೂ ಗಂಡಿನ ಉದ್ಯೋಗವೇ ಮದುವೆಗೆ ಮೊದಲ ಆದ್ಯತೆಯಾಗುತ್ತಿದೆ.
ಹೆಣ್ಣುಗಳು ಮದುವೆಗೆ ಮೊದಲೇ ನನ್ನ ಗಂಡನಾಗುವವನಿಗೆ ತಿಂಗಳಿಗೆ ಲಕ್ಷಗಟ್ಟಲೆ ವರಮಾನವಿರಬೇಕು, ಕಾರು ಬಂಗಲೆ, ಎಲ್ಲವೂ ಇರಬೇಕು ಎನ್ನುವ ಕನಸನ್ನೇ ಕಾಣುತ್ತಿರುತ್ತಾರೆ. ಇದಕ್ಕೆ ಅವರ ಹೆತ್ತವರು ಸಾಕಷ್ಟು ಬೆಂಬಲವನ್ನೇ ಕೊಟ್ಟಿರುತ್ತಾರೆ. ನಿಮ್ಮ ಹೆಂಡತಿಯ ಅಂಥ ಬಲವಾದ ಕನಸಿಗೆ ನಿಮ್ಮ ನಿರುದ್ಯೋಗ, ಕೊಡಲಿ ಪೆಟ್ಟಿನಂತೆ ಕೆಲಸ ಮಾಡುತ್ತಿದೆ. ಅಲ್ಲದೆ ನೀವು ಬಿಟ್ಟ ಸಂಸ್ಥೆಯಲ್ಲಿಯೇ ಅವರಿನ್ನೂ ದುಡಿಯುತ್ತಿರುವುದರಿಂದ ಸಹೋದ್ಯೋಗಿಗಳ ಕುಹಕವನ್ನು ಅವರು ಎದುರಿಸುತ್ತಿರಬಹುದು.
ದಿನದಿಂದ ದಿನಕ್ಕೆ ಅವರಲ್ಲಿ ಉಂಟಾಗುತ್ತಿರುವ ಹತಾಶೆಯೇ ಅವರ ಈ ನಡವಳಿಕೆಗೆ ಕಾರಣವೆನಿಸುತ್ತದೆ. ನೀವೀಗ ಎರಡು ಮಾರ್ಗಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು ಅನಿಸುತ್ತದೆ. ಮೊದಲನೆಯದಾಗಿ, ಅವರೊಂದಿಗೆ ಕೂತು ಸೌಹಾರ್ದಯುತವಾಗಿ
ಮಾತನಾಡುವುದು. ಈ ಮಾತುಗಳಲ್ಲಿ ಅವರನ್ನು ಆಕ್ಷೇಪಣೆ ಮಾಡುವಂತಿಲ್ಲ. ಬದಲಿಗೆ ಅವರ ಕಷ್ಟಗಳನ್ನು ಕೇಳಿಕೊಳ್ಳುತ್ತ, ನೀವು ಪಡುತ್ತಿರುವ ಕಷ್ಟಗಳನ್ನು (ಮನೆಗೆಲಸದ ಬಗ್ಗೆ ಅಲ್ಲ, ಕೆಲಸ ಹುಡುಕುತ್ತಿರುವುದರ ಬಗ್ಗೆ) ಹಂಚಿಕೊಳ್ಳುವುದು.
ಈರೀತಿಯ ಕೊಡುಕೊಳ್ಳುವಿಕೆ ಸಂಬಂಧಗಳ ಬೆಸುಗೆಯಲ್ಲಿ ಸಹಕಾರಿ. ಪ್ರತಿನಿತ್ಯ ಇದಕ್ಕಾಗಿ ಅರ್ಧಗಂಟೆಯನ್ನಾದರೂ ವ್ಯಯಿಸಬೇಕು. ಪ್ರಾರಂಭದಲ್ಲಿ ಇದೊಂದು ಕೃತಕವೂ, ಅನಾಕರ್ಷಕವೂ ಎನಿಸಬಹುದು. ಆದರೆ ಇದರಲ್ಲೂ ಕ್ರಮೇಣ ಹೊಸತನ ಹುಟ್ಟುವ ಸಾಧ್ಯತೆ ಇದೆ. ಎರಡನೆಯದಾಗಿ ಸ್ವಲ್ಪದಿನದ ಮಟ್ಟಿಗೆ ನಿಮ್ಮ ತಂದೆತಾಯಿಯರಿರುವ ಊರಿನಲ್ಲಿದ್ದು ಅಲ್ಲಿಂದಲೇ ನೀವು ಕೆಲಸಕ್ಕೆ ಪ್ರಯತ್ನಿಸುವುದು. ನಿಮ್ಮಿಂದ ಅಗಲಿದಾಗ ಅವರಿಗೆ ನಿಮ್ಮ ಬಗ್ಗೆ ಮರುಚಿಂತನೆ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ಎರಡು
ರೀತಿಯ ಸಂದೇಶವನ್ನು ನೀವು ಅವರಿಗೆ ಕೊಡಬಹುದು.
1. ಅವಮಾನದ ಪರಿಸರದಲ್ಲಿ ಹೆಚ್ಚುದಿನ ಯಾರೂ ಬದುಕಲು ಸಾಧ್ಯವಿಲ್ಲವೆನ್ನುವುದು.
2. ಹೊರ ಮತ್ತು ಒಳಕೆಲಸಗಳನ್ನು ಅವರೊಬ್ಬರೇ ನಿಭಾಯಿಸಬೇಕಾದಾಗ ನಿಮ್ಮ ಅಗತ್ಯ ಅವರಿಗೆಷ್ಟು ಮುಖ್ಯ ಎಂದು ಅವರೇ
ಅರಿಯುವಂತೆ ಮಾಡುವುದು. ಈ ಮಾರ್ಗಗಳನ್ನು ನೀವು ಪ್ರಯೋಗಕ್ಕೆ ಇಳಿಸಿದಾಗ ನಿಮಗೆ ಬೇರೆ ಬೇರೆ ಸಭ್ಯ ಮಾರ್ಗಗಳು ಗೋಚರಿಸಬಹುದಲ್ಲವೇ? ಏಕೆಂದರೆ ಇದು ನಿಮ್ಮ ಸಂಬಂಧ. ಅದರ ಸೂಕ್ಷ್ಮ ಎಳೆಗಳು ನಿಮ್ಮಿಬ್ಬರಿಗೆ ತಾನೇ ಚೆನ್ನಾಗಿ ಗೊತ್ತಿರುವಂಥದು? ಪ್ರಯತ್ನಿಸಿ. ಒಂದಲ್ಲ ಒಂದು ಮಾರ್ಗದಲ್ಲಿ ಖಂಡಿತ ಯಶಸ್ಸನ್ನು ಪಡೆದೇ ಪಡೆಯುತ್ತೀರಿ.