ಪ್ರಿಯತಮನ ಕಣ್ಣುತಪ್ಪಿಸಿ ಚಾಟಿಂಗ್‌: ಪಾಸ್‌ವರ್ಡ್‌ಗಾಗಿ ಕೊಲೆಯಾದಳು ಮಹಿಳೆ!

password
Published on

ನವದೆಹಲಿ: 17 ವರ್ಷದ ಬಾಲಕನ ತಾಯಿಯೊಬ್ಬಳು ತನ್ನ ಪ್ರಿಯಕರನಿಗೆ ಫೋನ್‌ನ ಪಾಸ್‌ವರ್ಡ್‌ ನೀಡಲು ನಿರಾಕರಿಸಿದ ಕಾರಣ, ಕೊಲೆಯಾಗಿ ಹೋದ ಭೀಕರ ಘಟನೆ ದೆಹಲಿಯ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ.

ಮಮತಾ ಶರ್ಮಾ ಎಂಬಾಕೆ ಕೊಲೆಯಾದ ಮಹಿಳೆ. ಬ್ರಹ್ಮಪಾಲ್ ಸಿಂಗ್ ಎಂಬ ವ್ಯಕ್ತಿಯ ಜತೆ ಈಕೆ ಲಿವ್‌ ಇನ್‌ ರಿಲೇಷನ್‌ನಲ್ಲಿ ಇದ್ದಳು. ಈಕೆಗೆ 17 ವರ್ಷದ ಮಗ ಕೂಡ ಇದ್ದಾನೆ. ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಮತಾ, ಮೊನ್ನೆ ಬ್ರಹ್ಮಪಾಲ್ ಮನೆಗೆ ಬಂದಾಗ ಯಾರ ಬಳಿಯೋ ಚಾಟಿಂಗ್‌ ಮಾಡುತ್ತಿದ್ದಳು.

ಇದನ್ನು ಗಮನಿಸಿದ ಬ್ರಹ್ಮಪಾಲ್‌ ಸಂದೇಹಗೊಂಡು ತಾನು ಅದನ್ನು ನೋಡಲು ಬಯಸಿದ್ದು, ಪಾಸ್‌ವರ್ಡ್‌ ನೀಡುವಂತೆ ಕೇಳಿದ್ದಾನೆ. ಆದರೆ ಆಕೆ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟುಗೊಂಡ ಆತ ಮಮತಾಳಕ್ಕೆ ಸುತ್ತಿಗೆಯನ್ನು ಭೀಕರವಾಗಿ ಹೊಡೆದು ಸಾಯಿಸಿ ಪರಾರಿಯಾಗಿದ್ದಾನೆ.

ಸಂಜೆ 17 ವರ್ಷದ ಮಗ ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಲೆ ಜಜ್ಜಿ ಹೋಗಿತ್ತು. ತಾಯಿಯ ಮೃತದೇಹದ ಪಕ್ಕದಲ್ಲಿಯೇ ಸುತ್ತಿಗೆ ಕೂಡ ಬಿದ್ದಿತ್ತು. ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಬ್ರಹ್ಮಪಾಲ್‌ಗಾಗಿ ತಡಕಾಡಿದಾಗ ಆತ ನಾಪತ್ತೆಯಾಗಿರುವುದು ತಿಳಿದುಬಂತು. ಕೂಡಲೇ ಆತನೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಸಂದೇಹ ಬಂತು.

ಅವನಿಗಾಗಿ ಜಾಲಬೀಸಿದಾಗ ಸಿಕ್ಕಿಬಿದ್ದ ಬ್ರಹ್ಮಪಾಲ್‌ ತನ್ನ ತಪ್ಪನ್ನು ಒಪ್ಪಿಕೊಂಡು ವಿಷಯ ತಿಳಿಸಿದ್ದಾನೆ. ಈಕೆ ಗಂಡನನ್ನು ಮೂರು ವರ್ಷಗಳ ಹಿಂದೆ ಬಿಟ್ಟು ಬ್ರಹ್ಮಪಾಲ್‌ ಜತೆ ಸಂಬಂಧ ಬೆಳೆಸಿಕೊಂಡಿದ್ದಳು. ಬ್ರಹ್ಮಪಾಲ್‌ಗೆ ಇದಾಗಲೇ ಮದುವೆಯಾಗಿ ಮೂರು ಮಕ್ಕಳು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net