ಇರುವೆ ತಂದಿಟ್ಟ ಸಂಕಷ್ಟ: ಬದುಕು ಹೈರಾಣ- ಊರನ್ನೇ ತೊರೆಯುತ್ತಿರುವ ಗ್ರಾಮಸ್ಥರು!

Ant
Published on

ಪುರಿ (ಒಡಿಶಾ): ಪ್ರವಾಹದಿಂದ ತತ್ತರಿಸಿರುವ ಊರುಗಳ ಪೈಕಿ ಒಡಿಶಾದ ಪುರಿ ಕೂಡ ಒಂದು. ಆದರೆ ಪ್ರವಾಹಕ್ಕಿಂತಲೂ ವಿಚಿತ್ರ ರೀತಿಯ ಹಾನಿಯಿಂದ ಕಂಗಾಲಾಗಿದ್ದಾರೆ ಪುರಿಯ ಬ್ರಾಹ್ಮಣಸಾಹಿ ಎಂಬ ಗ್ರಾಮದ ಜನ.

ಸಂಪೂರ್ಣ ಗ್ರಾಮದಲ್ಲೀಗ ಇರುವೆಗಳು ಆಕ್ರಮಣ ನಡೆಸಿವೆ. ಪುರಿ ಸಮೀಪದ ಚಂದ್ರದೈಪುರ ಪಂಚಾಯತ್ ವ್ಯಾಪ್ತಿಯಲ್ಲಿನ ಈ ಗ್ರಾಮದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಈ ಇರುವೆಗಳು ಗ್ರಾಮದಲ್ಲಿರುವ ಮಣ್ಣಿನ ಮನೆಗಳನ್ನೇ ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಈ ಮೊದಲು ಹತ್ತಿರದ ಕಾಲುವೆಯ ಭಾಗದಲ್ಲಿ ಕಾಣಿಸುತ್ತಿದ್ದ ಇವು ಇದೀಗ ಗ್ರಾಮಕ್ಕೆ ಲಗ್ಗೆ ಇಟ್ಟಿವೆ.

ಇಲ್ಲಿರುವ 100ಕ್ಕೂ ಅಧಿಕ ಕುಟುಂಬಗಳು ಇರುವೆಯಿಂದಾಗಿ ತತ್ತರಿಸಿ ಹೋಗಿವೆ. ಇದರಿಂದಾಗಿ ಇದಾಗಲೇ ಹಲವು ಕುಟುಂಬಗಳು ಮನೆಗಳನ್ನು ಬಿಟ್ಟು ಬೇರೆ ಕಡೆ ವಲಸೆ ಹೋಗಿದ್ದು, ಇನ್ನೂ ಹಲವರು ಮನೆ ತೊರೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಜನರು ತಮ್ಮ ಸುತ್ತಲೂ ಇರುವೆ ಸಾಯುವ ರೇಖೆಯನ್ನು ಎಳೆದುಕೊಂಡು ಅವುಗಳ ಬಾರದಂತೆ ನೋಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ವಿಷಪೂರಿತ ಎನಿಸಿರುವ ಈ ಇರುವೆಗಳು ಜನರ ಮೇಲೆ ಮಾತ್ರವಲ್ಲದೇ ಪ್ರಾಣಿಗಳ ಮೇಲೂ ದಾಳಿ ಮಾಡುತ್ತಿವೆ. ಎಲ್ಲಿಗೆ ಹೋದರೂ ಇವು ಬಿಡುತ್ತಿಲ್ಲ. ಇದಾಗಲೇ ಕೀಟನಾಶಕ ಸಿಂಪಡಣೆ ಮಾಡಿದ್ದರೂ ಇವುಗಳ ಕಾಟ ಮುಗಿದಿಲ್ಲ.

ಹಳ್ಳಿಯ ಎಲ್ಲೆಂದರಲ್ಲಿ ಇರುವೆಗಳ ಹಿಂಡುಗಳು ಕಾಣುತ್ತಿವೆ. ಮರಗಳು, ಬೇರುಗಳು, ಮರದ ರಾಶಿಗಳು, ಮನೆಯ ಗೋಡೆಗಳು, ವಿದ್ಯುತ್ ಫಲಕಗಳು ಸೇರಿದಂತೆ ಗ್ರಾಮದ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ಇರುವೆಗಳು ಗೂಡು ಕಟ್ಟಿವೆ. ತಿಳಿ ಕೆಂಪು ಛಾಯೆಯ ಇರುವೆಗಳು ಸಾಮಾನ್ಯ ಇರುವೆಗಿಂತ ಸ್ವಲ್ಪ ದೊಡ್ಡದಾಗಿವೆ. ಪಶುವೈದ್ಯರು ಈ ಅಪಾಯಕಾರಿ ಇರುವೆಗಳು ಬೆಂಕಿ ಇರುವೆಗಳ ರೂಪಾಂತರ ತಳಿ ಆಗಿರಬಹುದು ಎಂದು ಶಂಕಿಸಿದ್ದಾರೆ. ಇವುಗಳನ್ನು ಹೇಗೆ ನಿಯಂತ್ರಣ ಮಾಡಬೇಕು ಎಂಬ ತಲೆಬಿಸಿಯಲ್ಲಿ ಅಧಿಕಾರಿಗಳು ಇದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net