ಏನೂ ಕೆಲಸ ಮಾಡದೇ, ಸತತ ನಿದ್ದೆ ಮಾಡಿಕೊಂಡೇ ಐದು ಲಕ್ಷ ರೂ. ಬಹುಮಾನ ಗೆದ್ದ ಯುವತಿ!

sleep
Published on

ಹೂಗ್ಲಿ (ಪಶ್ಚಿಮ ಬಂಗಾಳ): ಏನೂ ಕೆಲಸ ಮಾಡದೇ ಸುಮ್ಮನೇ ಮಲಗಿಕೊಂಡೇ ಇದ್ದರೆ ಐದು ಲಕ್ಷ ರೂಪಾಯಿ ಗಳಿಸಬಹುದು ಎಂದರೆ ನಂಬುವಿರಾ?

ನಂಬಲೇಬೇಕಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಲ್ಲಿಯ ಹೂಗ್ಲಿಯ ತ್ರಿಪರ್ಣಾ ಚಕ್ರವರ್ತಿ ಎಂಬ ಯುವತಿ ಮಲಗಿಕೊಂಡೇ ಇದ್ದು ಐದು ಲಕ್ಷ ರೂಪಾಯಿ ಬಹುಮಾನ ಗಳಿಸಿದ್ದಾರೆ!

‘ಹೂಗ್ಲಿಯ ಮ್ಯಾಟ್ರೆಸ್​ ಕಂಪೆನಿ ರಾಷ್ಟ್ರವ್ಯಾಪಿ ಆಯೋಜಿಸಿದ್ದ ನಿದ್ರಿಸುವ ಸ್ಪರ್ಧೆಯಲ್ಲಿ ಇವರು ಈ ಬೃಹತ್​ ಮೊತ್ತದ ಬಹುಮಾನವನ್ನು ಪಡೆದುಕೊಂಡಿದ್ದಾರೆ. 100 ದಿನಗಳ ಕಾಲ ನಿರಂತರವಾಗಿ ಕನಿಷ್ಠ 9 ಗಂಟೆಗಳ ಕಾಲ ನಿದ್ರಿಸುವುದು ಸ್ಪರ್ಧೆಯ ಮುಖ್ಯ ನಿಯಮವಾಗಿತ್ತು. ಇದನ್ನು ಮಾಡುವ ಮೂಲಕ ಈಕೆ ಬಹುಮಾನ ಗೆದ್ದಿದ್ದಾರೆ.

ಅಮೆರಿಕದ ಕಂಪೆನಿಯೊಂದರಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ತ್ರಿಪರ್ಣಾ , ಬೆಳಗಿನ ಜಾವ ನಿದ್ದೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಆದರೆ ಈ ಸ್ಪರ್ಧೆಯಲ್ಲಿ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನಿದ್ದೆ ಮಾಡಿ ಬಹುಮಾನ ಗೆದ್ದಿದ್ದಾರೆ.

'ಬಾಲ್ಯದಿಂದಲೂ ನನಗೆ ಹೆಚ್ಚು ನಿದ್ದೆ ಮಾಡುವುದು ಎಂದರೆ ಪ್ರೀತಿ. ಆದರೆ ಇದೇ ನನಗೆ ಇಷ್ಟೊಂದು ಹಣವನ್ನು ನೀಡುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ' ಎಂದಿದ್ದಾರೆ ತ್ರಿಪರ್ಣಾ . 'ಸಮಯ, ಸಂದರ್ಭ ಲೆಕ್ಕಿಸದೆ ಯಾವುದೇ ಸ್ಥಳದಲ್ಲಿ ಬೇಕಾದ್ರೂ ತಕ್ಷಣ ನಿದ್ರೆಗೆ ಜಾರುವ ಜಾಯಮಾನ ಹೊಂದಿದ್ದೇನೆ. ಪರೀಕ್ಷಾ ಕೊಠಡಿ​, ಸಂದರ್ಶನದ ಕೊಠಡಿಯಲ್ಲಿಯೂ ಈ ಹಿಂದೆ ಸಹ ಅನೇಕ ಬಾರಿ ನಿದ್ರೆಯ ಮೊರೆ ಹೋಗಿದ್ದೂ ಇದೆ. ನನಗೆ ನಿದ್ರಿಸಬೇಕೆಂದು ಅನ್ನಿಸಿದಾಗ ರಾಜಿ ಮಾಡಿಕೊಳ್ಳಲಾರೆ' ಎಂದು ತ್ರಿಪರ್ಣಾ ಹೇಳಿದ್ದಾರೆ.

ಅಂದಹಾಗೆ ಈ ಸ್ಪರ್ಧೆಯಲ್ಲಿ ಸುಮಾರು 5.5 ಲಕ್ಷ ಜನರು ಭಾಗವಹಿಸಿದ್ದರು. ದಿನಕ್ಕೆ ಕನಿಷ್ಠ 9 ಗಂಟೆ ಯಾವ ಸ್ಥಳದಲ್ಲಿ ಬೇಕಾದರೂ ಮಲಗಿದರೆ ಅಂಥವರಿಗೆ ಬಹುಮಾನ ಎಂದು ಘೋಷಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ತ್ರಿಪರ್ಣಾ 100ಕ್ಕೆ 95ರಷ್ಟು ಅಂಕ ಪಡೆದುಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net