ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಕಾರು ಅಪಘಾತವಾಗಿದ್ದು ಹೇಗೆ? ತನಿಖೆಯಿಂದ ಸತ್ಯ ಬಯಲು...

mistri
Published on

ಮುಂಬೈ: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿನ್ನೆ (ಭಾನುವಾರ) ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಘಟನೆಯ ಕುರಿತಾಗಿ ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಅಪಘಾತಕ್ಕೀಡಾದ ಮರ್ಸಿಡಿಸ್​ ಕಾರನ್ನು ಮುಂಬೈನ ಖ್ಯಾತ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಚಲಾಯಿಸುತ್ತಿದ್ದರು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ.

ಅಪಘಾತಕ್ಕೀಡಾದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಅಹಮದಾಬಾದ್‌ನಿಂದ ಮುಂಬೈಗೆ ಬರುತ್ತಿದ್ದಾಗ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಈ ಘಟನೆಯಲ್ಲಿ ಮಿಸ್ತ್ರಿ ಮಾತ್ರವಲ್ಲದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೋರ್ವ ವ್ಯಕ್ತಿ ಕೂಡ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಾರಿನಲ್ಲಿ ವೈದ್ಯೆ ಅನಾಹಿತಾ ಜತೆ ಅವರ ಪತಿ ಡೇರಿಯಸ್ ಪಾಂಡೋಲೆ ಹಾಗೂ ಡೇರಿಯಸ್ ಅವರ ಸಹೋದರ ಜಹಾಂಗೀರ್ ಪಾಂಡೋಲೆ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ಮಿಸ್ತ್ರಿ ಹಾಗೂ ಜಹಾಂಗೀರ್ ಪಾಂಡೋಲೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಇನ್ನಷ್ಟು ಮಾಹಿತಿಗಳು ಕೂಡ ಲಭ್ಯವಾಗಿವೆ. ಮಿಸ್ತ್ರಿ ಅವರು ಪ್ರಯಾಣಿಸುತ್ತಿದ್ದ ಕಾರು ಅತಿವೇಗದಲ್ಲಿ ಇತ್ತು. ಎದುರಿಗೆ ಹೋಗುತ್ತಿದ್ದ ಇನ್ನೊಂದು ವಾಹನವನ್ನು ಎಡಭಾಗದಿಂದ ಓವರ್​ಟೇಕ್​ ಮಾಡಲು ಹೋಗಿ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ಅಪಘಾತದ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ಅನಾಹಿತಾ ಅವರೊಂದಿಗೆ ಪತಿ ಡೇರಿಯಸ್ ಎದುರಿನ ಸೀಟಿನಲ್ಲಿ ಕುಳಿತಿದ್ದರು. ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಹಿಂಬದಿ ಸೀಟಿನಲ್ಲಿ ಇದ್ದರು ಎಂದು ವರದಿಯಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆ ನಂತರ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಮಿಸ್ತ್ರಿ ಅವರ ಪಾರ್ಥಿವ ಶರೀರವನ್ನು ನವಿ ಮುಂಬೈನಿಂದ ಮುಂಬೈಗೆ ತರಲು ಉದ್ಯಮಿ ಗೌತಮ್ ಅದಾನಿ ಅವರ ಹೆಲಿಕಾಪ್ಟರ್ ಬಳಸಲಾಗುವುದು ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net