

ಹೈದರಾಬಾದ್: ಜೊಮ್ಯಾಟೋದ ಮೂಲಕ ಚಿಕನ್ ಬಿರಿಯಾನಿ ಪಾರ್ಸೆಲ್ ತರಿಸಿಕೊಂಡ ವ್ಯಕ್ತಿಯೊಬ್ಬ, ಬಿರಿಯಾನಿಯಲ್ಲಿ ಲೆಗ್‌ಪೀಸ್ ಇಲ್ಲದೇ ಭಾರಿ ನಿರಾಸೆಗೆ ಒಳಗಾಗಿ, ಸಿಟ್ಟಿನಿಂದ ಸಚಿವರಿಗೆ ದೂರು ದಾಖಲು ಮಾಡಿದ್ದಾನೆ. ಈ ದೂರನ್ನು ನೋಡಿ ಸಚಿವರು ಸುಸ್ತಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ವಸ್ತುವಾಗಿ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಆಗಿರುವುದು ಏನೆಂದರೆ ತೋಟಕುರಿ ರಘುಪತಿ ಎಂಬುವವರು ಬಿರಿಯಾನಿ ತರಿಸಿಕೊಂಡಿದ್ದಾರೆ. ಆದರೆ ಅದಲ್ಲಿ ಲೆಗ್‌ಪೀಸ್ ಇರಲಿಲ್ಲ. ಕೂಡಲೇ ಸಿಟ್ಟುಗೊಂಡ ಅವರು, ತೆಲಂಗಾಣದ ನಗರಾಭಿವೃದ್ಧಿ ಸಚಿವ ಕೆಟಿ ರಾಮರಾವ್ ಅವರನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ ದೂರು ದಾಖಲಿಸಿದ್ದಾರೆ. ಸಾಮಾನ್ಯವಾಗಿ ರಾಮರಾವ್ ಅವರು ಜನತೆಯ ಮನವಿಗೆ ಸ್ಪಂದಿಸುವ ಕಾರಣ, ಈ ರೀತಿ ಟ್ಯಾಗ್ ಮಾಡಿದ್ದಾರೆ.
ಇದೀಗ ಭಾರಿ ವೈರಲ್ ಆಗಿದ್ದು, ಜನರು ತಮಾಷೆಯಾಗಿ ಕಮೆಂಟ್ ನೀಡುತ್ತಿದ್ದಾರೆ. ಕರೊನಾದಿಂದ ಭಯಭೀತರಾಗಿರುವ ಜನರಿಗೆ ಇದು ತುಂಬಾ ಮನರಂಜನೆ ನೀಡುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.