ನಾಮಿನಿಯಾದ ಮಾತ್ರಕ್ಕೆ ಎಲ್ಲಾ ಆಸ್ತಿ ಅವರದ್ದೇ ಆಗತ್ತಾ? ಕಾನೂನು ಏನು ಹೇಳುತ್ತದೆ ಎಂದು ನೋಡಿ....

nyayadevate
Published on
ನನ್ನ ಪತಿ ಸರ್ಕಾರಿ ನೌಕರ ಆಗಿದ್ದು ಮೃತಪಟ್ಟಿದ್ದಾರೆ. ಅವರ ಎಲ್ಐಸಿ ಎಲ್ಲಾ ಮೊತ್ತ ನಾಮಿನಿ ಕಾರಣದಿಂದ ನನ್ನ ಅತ್ತೆ ಖಾತೆಗೆ ಜಮಾ ಆಗಿರುತ್ತದೆ. ನನ್ನ ಮಾವನವರೂ ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ನನ್ನ ಅತ್ತೆಗೆ ಪಿಂಚಣಿ ಬರುತ್ತಿದೆ. ಅವರ ಹೆಸರಿನಲ್ಲಿ ಮನೆಯೂ ಇದೆ. ನನಗೆ 8 ವರ್ಷದ ಮಗಳು ಇದ್ದು, ಮನೆ ಮತ್ತು ಇತರ ಆರ್ಥಿಕ ಆದಾಯ ಇರುವುದಿಲ್ಲ. ಜೀವನ ನಡೆಸಲು ಕಷ್ಟ ಆಗುತ್ತಿದೆ. ಅತ್ತೆ ಮತ್ತು ಸೊಸೆ ತೀರ್ಮಾನ ಮಾಡಿಕೊಂಡು ಬನ್ನಿ ಎಂದು ಕಚೇರಿ ಮುಖ್ಯಸ್ಥರು ಹೇಳಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ಇರುವ ನಾನು ನನ್ನ ಅತ್ತೆ ಹೇಳಿದಕ್ಕೆಲ್ಲಾ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರುತ್ತೇನೆ. ಆದರೆ ನನ್ನ ಅತ್ತೆಯವರು ಅವರ ಅಳಿಯ ಮಾತು ಕೇಳಿಕೊಂಡು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ನನ್ನ ಮುಂದಿನ ನಡೆ ಬಗ್ಗೆ ಮಾಹಿತಿ ನೀಡಲು ಕೋರುತ್ತೇನೆ.

ಉತ್ತರ: ನೀವು ಕೂಡಲೇ ವಕೀಲರನ್ನು ಭೇಟಿ ಮಾಡಿ ನಿಮ್ಮ ಪತಿ ಕೆಲಸ ಮಾಡುತ್ತಿದ್ದ ಕಚೇರಿಗೆ ಮತ್ತು ಎಲ್​ಐಸಿಗೆ ನಿಮ್ಮ ಭಾಗದ ಬಗ್ಗೆ ಒಂದು ನೋಟಿಸ್​ ಕೊಡಿಸಿ. ಆ ನಂತರ ನಿಮ್ಮ ಅತ್ತೆಯನ್ನೂ ಮತ್ತು ನಿಮ್ಮ ಪತಿ ಕೆಲಸ ಮಾಡುತ್ತಿದ್ದ ಕಚೇರಿಯ ಅಧಿಕಾರಿಗಳನ್ನು (ಕಾನೂನಿನಂತೆ) ಮತ್ತು ಎಲ್​ಐಸಿಯನ್ನು ಪಾರ್ಟಿ ಮಾಡಿ ದಾವೆ ಹಾಕಿ. ನಿಮ್ಮ ಪತಿಯ ಹೆಸರಿನಲ್ಲಿ ಬೇರೆ ಆಸ್ತಿಗಳು ಇದ್ದರೆ ಅವನ್ನೂ ಸೇರಿಸಬಹುದು. ಇಂತಹ ದಾವೆಗೆ ಹೆಚ್ಚು ಖರ್ಚು ಆಗುವುದಿಲ್ಲ.

ನಿಮ್ಮ ಅತ್ತೆಗೆ ಹಣ ವಿತರಣೆ ಮಾಡದಂತೆ ತಡೆ ಪಡೆಯಬಹುದು. ನಾಮಿನಿ ಯಾರೇ ಆಗಿದ್ದರೂ ನಿಮ್ಮ ಪತಿಯ ಎಲ್ಲ ಚರ ಮತ್ತು ಸ್ಥಿತ ಆಸ್ತಿಗಳಲ್ಲಿಯೂ ನಿಮಗೂ, ನಿಮ್ಮ ಮಗಳಿಗೂ ಮತ್ತು ನಿಮ್ಮ ಪತಿಯ ತಾಯಿಗೂ ತಲಾ ಮೂರನೇ ಒಂದು ಭಾಗದ ಹಕ್ಕು ಇದ್ದೇ ಇರುತ್ತದೆ. ನಾಮಿನೇಷನ್​ ಮಾಡಿದ ಮಾತ್ರಕ್ಕೆ ವಾರಸುದಾರರ ಹಕ್ಕು ಕುಂಠಿತವಾಗುವುದಿಲ್ಲ. ಪಿಂಚಣಿ ಇತ್ಯಾದಿಗಳೂ ಸಂಬಂಧಪಟ್ಟ ಕಾನೂನಿನಂತೆ ಹಂಚಿಕೆ ಆಗುತ್ತದೆ. ನೀವು ಹೆದರಬೇಕಾಗಿಲ್ಲ. ನಿಮ್ಮ ಹತ್ತಿರದ ಕೋರ್ಟ್​ನಲ್ಲಿರುವ ಉಚಿತ ಕಾನೂನು ಸೇವಾ ಕೇಂದ್ರ ಸಂಪರ್ಕಿಸಿ. ನಯಾಪೈಸೆ ಖರ್ಚು ಇಲ್ಲದೇ ಕಾನೂನು ಸಹಾಯ ಮಾಡಿಕೊಡುತ್ತಾರೆ. ವಕೀಲರ ಖರ್ಚನ್ನೂ ಅವರೇ ನೋಡಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net