More

    ಪುತಿ ತುಡು ಎಂಬ ಬಾಲೆ ದ್ರೌಪದಿ ಮುರ್ಮು ಆಗಿದ್ಹೇಗೆ? ಹೆಸರಿನ ಗುಟ್ಟು ಬಿಚ್ಚಿಟ್ಟ ‘ಐತಿಹಾಸಿಕ’ ರಾಷ್ಟ್ರಪತಿ

    ನವದೆಹಲಿ: ದೇಶದ ಉನ್ನತ ಸ್ಥಾನ ರಾಷ್ಟ್ರಪತಿ ಹುದ್ದೆಯನ್ನು ಏರುವ ಮೂಲಕ ಇತಿಹಾಸ ಸೃಷ್ಟಿಸಿದವರು ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು. ಬದುಕಿನುದ್ದಕ್ಕೂ ದುಃಖಗಳ ಸರಮಾಲೆಯನ್ನೇ ಹೊತ್ತ ಹೆಣ್ಣುಮಗಳೊಬ್ಬಳು ಇಂದು ದೇಶದ ಮೊದಲ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಸುಲಭದ ಮಾತಲ್ಲ. ಇವರ ಜೀವನದಷ್ಟೇ ಕುತೂಹಲ ಆಗಿರುವುದು ಇವರ ಹೆಸರಿನ ಹಿನ್ನೆಲೆ.

    ದ್ರೌಪದಿ ಎಂದಾಕ್ಷಣ ನೆನಪಾಗುವುದು ಮಹಾಭಾರತಕ್ಕೆ ಮುನ್ನುಡಿ ಇಟ್ಟ ಪಂಚಾಲಿ. ಆದರೆ ಇದೀಗ ದ್ರೌಪದಿ ಎಂದರೆ ನೆನಪಾಗುವುದು ರಾಷ್ಟ್ರಪತಿ ಮುರ್ಮು. ಇವರ ಹೆಸರು ಹೀಗೇಕೆ ಎಂದು ಹಲವರಿಗೆ ಅನ್ನಿಸಿದ್ದು ಉಂಟು. ಸಾಮಾನ್ಯವಾಗಿ ಇಂಥ ಹೆಸರನ್ನು ಇಡುವುದು ಅತ್ಯಂತ ವಿರಳ ಎಂದುಕೊಂಡವರೇ ಹೆಚ್ಚು. ಆದರೆ ಆ ಹೆಸರಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ದ್ರೌಪದಿ ಮುರ್ಮು ಅಲಿಯಾಸ್ ಪುತಿ ತುಡು.

    ಪುತಿ, ದ್ರೌಪದಿಯಾದದ್ದು ಹೇಗೆ?

    ಸಂತಲಿ, ತುಡು ಆದಿವಾಸಿ ಸಮುದಾಯದಲ್ಲಿ ಹುಟ್ಟಿದ ಈ ನೂತನ ರಾಷ್ಟ್ರಪತಿಯವರ ಮೊದಲಿನ ಹೆಸರು ಪುತಿ. ಈ ಜನಾಂಗದ ಸಂಪ್ರದಾಯದಂತೆ ಹೆಣ್ಣುಮಕ್ಕಳಿಗೆ ಅವರ ಅಜ್ಜಿಯ ಹೆಸರು ಹಾಗೂ ಗಂಡುಮಕ್ಕಳಿಗೆ ಅಜ್ಜನ ಹೆಸರು ಇಡುತ್ತಾರೆ. ಅದರಂತೆಯೇ ಈ ಬಾಲಕಿಗೆ ಇಟ್ಟಿದ್ದು ಅಜ್ಜಿಯ ಹೆಸರು ಪುತಿ ಎಂದು.

    ಶಾಲಾ ದಾಖಲಾತಿಯಲ್ಲಿಯೂ ಪುತಿ ಎಂದೇ ಉಲ್ಲೇಖವಾಗಿತ್ತು. ಇವರ ಸಮುದಾಯದ ಹೆಸರು (ಸರ್​ ನೇಮ್​​) ತುಡು ಆಗಿದ್ದರಿಂದ ಪುತಿ ತುಡು ಎಂದು ಹೆಸರು ದಾಖಲೆಗಳಲ್ಲಿ ಉಲ್ಲೇಖಿತವಾಗಿತ್ತು.

    ಆದರೆ ಶಾಲೆಯಲ್ಲಿ ಒಬ್ಬ ಶಿಕ್ಷಕಿಗೆ ಈ ಹೆಸರು ಯಾಕೋ ಅಷ್ಟು ಹಿಡಿಸಲಿಲ್ಲ. ಪ್ರತಿಭಾನ್ವಿತೆಯಾಗಿದ್ದ ಪುತಿ ಎಂಬ ಬಾಲಕಿಯ ಹೆಸರು ತುಂಬಾ ಸುಂದರವಾಗಿ ಇರಬೇಕು. ಅಜ್ಜಿಯ ಹೆಸರು ಈಕೆಗೆ ಸರಿಹೊಂದುವುದಿಲ್ಲ ಎನ್ನುವ ಕಾರಣಕ್ಕೆ ಅವರು ಇಟ್ಟಿದ್ದು ದ್ರೌಪದಿ ಎಂದು. ‘ದ್ರೌಪದಿ ಎಂದರೆ ಒಳ್ಳೆಯವಳು ಎಂಬ ಅರ್ಥವಿದೆ. ನೀನು ತುಂಬಾ ಒಳ್ಳೆಯ ಹುಡುಗಿ. ಆದ್ದರಿಂದ ಇಂದಿನಿಂದ ನಿನ್ನ ಹೆಸರು ದ್ರೌಪದಿ ಎಂದು ಶಿಕ್ಷಕಿ ಹೇಳಿದರು. ಅಲ್ಲಿಂದ ನಾನು ದ್ರೌಪದಿ ಆದೆ’ ಎಂದು ಸಂದರ್ಶನವೊಂದರಲ್ಲಿ ಇವರು ಹೇಳಿಕೊಂಡಿದ್ದಾರೆ.

    ಪುತಿ ಎಂಬ ಹೆಸರು ಅಷ್ಟು ಸರಿಯಾಗಿಲ್ಲವೆಂದು ಈ ಮೊದಲು ನನಗೆ ಬೇರೆ ಬೇರೆ ಹೆಸರುಗಳನ್ನೂ ಇಡಲಾಗಿತ್ತು. ದುರ್ಗಾಡಿ, ದೋರ್ಪಿಡಿ ಎಂದೆಲ್ಲಾ ಕರೆಯುತ್ತಿದ್ದರು. ದ್ರೌಪದಿ ಎಂದು ಕರೆದ ಮೇಲೂ ನಮ್ಮ ಜನಾಂಗದವರಿಗೆ ಇವೆಲ್ಲಾ ಕರೆಯುವುದು ಕಷ್ಟವಾಗಿ ಇಂದಿಗೂ ಪುತಿ ಎಂದೇ ಕರೆಯುತ್ತಾರೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

    ದ್ರೌಪದಿ ಎಂದೇ ಚಿರಪರಿಚಿತಳಾದ ಮೇಲೆ ನನ್ನ ಸಮುದಾಯದ ಹೆಸರನ್ನೂ ಅದರಲ್ಲಿ ಸೇರಿಸಿ ದ್ರೌಪದಿ ತುಡು ಎಂದು ಕರೆಯಲಾಯಿತು. ಇದೇ ಹೆಸರನ್ನು ಶಾಲೆಯಲ್ಲಿ ನಮೂದು ಮಾಡಲಾಯಿತು. ನಂತರ ಬ್ಯಾಂಕ್ ಉದ್ಯೋಗಿ ಶ್ಯಾಮ್ ಚರಣ್ ಮುರ್ಮು ಅವರನ್ನು ಮದುವೆಯಾದ ಮೇಲೆ ನಾನು ದ್ರೌಪದಿ ಮುರ್ಮು ಆದೆ ಎಂದರು. (ಏಜೆನ್ಸೀಸ್​)

    VIDEO: ಇಂದು ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು- ಸಂಘರ್ಷದಿಂದ ಶಿಖರದವರೆಗೆ… ಪುಸ್ತಕ ಬರೆದ 13ರ ಬಾಲಕಿ,

    ದೇಶದ ಮೊದಲ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು: ಸಿಜೆಐ ಪ್ರಮಾಣ ವಚನ ಬೋಧನೆ

    ಬುದ್ಧಿ ಹೇಳಿದರೂ ಕೇಳದ ಕಾಂಗ್ರೆಸ್​ನ ನಾಲ್ವರು ಸಂಸದರು ಅಮಾನತು: ಮುಂಗಾರು ಅಧಿವೇಶನದಿಂದ ಔಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts