ನನ್ನಂಥವರಿಗಾಗಿ ನಿಯಮ ಬದಲಿಸಿ: 77ರ ಅಜ್ಜಿಯಿಂದ ಸುಪ್ರೀಂಕೋರ್ಟ್​ಗೆ ಅರ್ಜಿ

Bar council
Published on

ನವದೆಹಲಿ: ಕಲಿಯಲು ವಯಸ್ಸಿನ ಹಂಗು ಇಲ್ಲದಿರುವಾಗಿ ಕಾನೂನು ಪದವಿ ಕಲಿಯಲು ವಯಸ್ಸಿನ ಮಿತಿ ಏಕೆ ಮಾಡಿದ್ದು?

ಇದು 77 ವರ್ಷದ ವೃದ್ಧೆಯ ಪ್ರಶ್ನೆ. ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇವರೀಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

ಕಾನೂನು ಪದವಿ ಪಡೆಯಲು ಗರಿಷ್ಠ ವಯೋಮಿತಿ ನಿಗದಿಪಡಿಸಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ರೂಪಿಸಿರುವ ನಿಯಮವನ್ನು ಉತ್ತರ ಪ್ರದೇಶದ ಶಹಿಬಾಬಾದ್‌ ನಿವಾಸಿ ರಾಜಕುಮಾರಿ ತ್ಯಾಗಿ ಎಂಬುವವರು ಪ್ರಶ್ನಿಸಿದ್ದಾರೆ.

ಐದು ವರ್ಷಗಳ ಕಾನೂನ ಪದವಿ ಪ್ರವೇಶ ಪಡೆಯಲು ಗರಿಷ್ಠ 20 ವರ್ಷ ಮೀರಬಾರದು ಮತ್ತು ಮೂರು ವರ್ಷಗಳ ಕಾನೂನು ಪದವಿಗೆ ಗರಿಷ್ಠ 30 ವರ್ಷ ಮೀರಬಾರದು ಎಂದು ಬಿಸಿಐ ನಿಯಮ ರೂಪಿಸಿದೆ. ಈ ನಿಯಮವನ್ನು ಪ್ರಶ್ನಿಸಿ ಈಗಾಗಲೇ ಕೆಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದಿನ್ನೂ ವಿಚಾರಣೆ ಹಂತದಲ್ಲಿದೆ. ಇದೀಗ ತ್ಯಾಗಿ ಅವರೂ ಕೋರ್ಟ್​ ಮೊರೆ ಹೋಗಿದ್ದು, ಈ ನಿಯಮ ರದ್ದು ಮಾಡುವಂತೆ ಕೋರಿದ್ದಾರೆ.

ಪತಿ ಮೃತಪಟ್ಟ ಬಳಿಕ ಏಕಾಂಗಿಯಾಗಿರುವ ರಾಜಕುಮಾರಿ ತ್ಯಾಗಿ ಅವರಿಗೆ ಜಮೀನಿನ ದಾಖಲೆಗಳು ಮತ್ತು ಉಯಿಲು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಿನ ಜ್ಞಾನ ಪಡೆದುಕೊಳ್ಳುವ ಹಂಬಲ, ಇದೇ ಕಾರಣಕ್ಕೆ ಮೂರು ವರ್ಷದ ಕಾನೂನು ಪದವಿ ಪಡೆಯಲು ಮುಂದಾಗಿದ್ದರು. ಆದರೆ ಬಿಸಿಐ ರೂಪಿಸಿರುವ ನಿಯಮದಿಂದಾಗಿ ಅವರಿಗೆ ಪ್ರವೇಶ ಸಿಗಲಿಲ್ಲ.

ಇದನ್ನೀಗ ಇವರು ಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಈ ನಿಯಮದಿಂದಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಯಾವುದೇ ವೃತ್ತಿ ಹೊಂದುವ ಅವಕಾಶವನ್ನು ನಿರಾಕರಿಸುತ್ತದೆ ಎಂದು ಅವರು ವಾದಿಸಿದ್ದಾರೆ. ಸಂವಿಧಾನದ ಅನ್ವಯ ತನ್ನ ಹಕ್ಕು ಕಾಪಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು' ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net