

ಚೆನ್ನೈ: ಲಾಕ್ಡೌನ್ ಅವಧಿಗೂ ಮುಂಚೆ ಆರಾಮಾಗಿ ತಿರುಗಾಡಿಕೊಂಡಿದ್ದ ಚೆನ್ನೈನ ಕೊರಕ್ಕುಪೇಟೆ ಜೋಡಿ, ಲಾಕ್ಡೌನ್ ಟೈಂನಲ್ಲಿ ಮೀಟ್ ಆಗಲು ಸಾಧ್ಯವಾಗದೇ ಮನನೊಂದು ಹೋಗಿದ್ದರು.
ಪ್ರತಿದಿನವೂ ಮೆಸೇಜ್, ಕಾಲ್ ಮಾಡುತ್ತಲೇ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಈ ಯುವತಿ, ಅರೆಕ್ಷಣ ನಿನ್ನನ್ನು ಬಿಟ್ಟು ಇರಲಾರೆ ಎಂದು ಹೇಳುತ್ತಲೇ ಇದ್ದಳು. ಲಾಕ್ಡೌನ್ ಯಾವಾಗ ಮುಗಿಯುತ್ತೋ, ಯಾವಾಗ ನಿನ್ನನ್ನು ಮೀಟ್ ಮಾಡುತ್ತೇನೆಯೋ ಎಂದು ಪ್ರಿಯತಮನಿಗೆ ಹೇಳುತ್ತಿದ್ದಳು.
ಈ ಕಾರಣದಿಂದ ಆಟೋಡ್ರೈವರ್ ಆಗಿರುವ 22 ವರ್ಷದ ಪ್ರಿಯತಮ ದುರೈ, ಲಾಕ್ಡೌನ್ ಅವಧಿ ಮುಗಿಯುವುದನ್ನೇ ಕಾಯುತ್ತಿದ್ದ.
ಆದರೆ ಲಾಕ್ಡೌನ್ ಮುಗಿಯಿತು, ಎಲ್ಲವೂ ಯಥಾಸ್ಥಿತಿಗೆ ಬಂದರೂ ಪ್ರಿಯತಮೆಯ ಕರೆಯೂ ಇಲ್ಲ, ಮೆಸೇಜೂ ಇಲ್ಲ. ಹೋಗಲಿ ಎಂದರೆ ಪ್ರಿಯತಮ ಕಳಿಸಿರುವ ಮೆಸೇಜ್ಗೂ ಆಕೆ ರಿಪ್ಲೈ ಮಾಡುತ್ತಿಲ್ಲ, ಕರೆಯನ್ನೂ ಸ್ವೀಕರಿಸುತ್ತಿಲ್ಲ. ಇದರಿಂದ ನೊಂದು ಬೆಂದು ಹೋಗಿರುವ ದುರೈ ತಾನು ವಾಸವಾಗಿರುವ ಮೂರನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ!
ಕೊರಕ್ಕುಪೇಟೆಯ ಪಟ್ಟಾಭಿಷೇಕ ನಗರ ನಿವಾಸಿಯಾಗಿರುವ ದುರೈ, ಗೆಳತಿ ಫೋನ್ ಹಾಗೂ ಮೆಸೇಜ್ ನಿರ್ಲಕ್ಷ್ಯಿಸುತ್ತಿದ್ದಾಳೆ ಎಂದು ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆದರೆ ಈತನ ಪ್ರಾಣಕ್ಕೆ ಏನೂ ಅಪಾಯವಾಗಲಿಲ್ಲ. ಬದಲಿಗೆ ಕಾಲಿನ ಮೂಳೆಗಳು ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಈತನ ಚೀರಾಟ ಕೇಳಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿ ಗಂಭಿರವಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಲಾಗುತ್ತಿದೆ.
ಸದ್ಯ ಯುವಕ ಪ್ರಜ್ಞಾಹೀನನಾಗಿದ್ದು, ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ದುರೈ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ದುರೈ ಆರೋಗ್ಯ ಸುಧಾರಿಸಿದ ಬಳಿಕ ಆತನ ಬಳಿಯಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.