

ಬಾಗಲಕೋಟೆ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದು ನಾಣ್ಣುಡಿ. ಇದೇ ಕಾರಣಕ್ಕೆ ಸ್ವಾಮಿಗಳ ವೇಷದಲ್ಲಿ ಜನರನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರನ್ನು ಮೋಸ ಮಾಡುತ್ತಿರುವವರು ಎಲ್ಲೆಡೆ ಕಾಣಸಿಗುತ್ತಿದ್ದಾರೆ.
ಅಂಥದ್ದೇ ಒಬ್ಬ ಸ್ವಯಂ ಘೋಷಿತ ಸ್ವಾಮೀಜಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಕ್ಕಳಾಗಲಿಲ್ಲ ಎಂದು ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯರಿಗೆ ಪರಿಹಾರ ನೀಡುವೆನೆಂದು ಉಡದ ಜನನಾಂಗವನ್ನು ಈತ ಮಾರುತ್ತ ದುಡ್ಡು ಮಾಡುತ್ತಿದ್ದ. ಈತನಿಗೆ ಸಹಾಯ ಮಾಡುತ್ತಿದ್ದ ಇನ್ನೂ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ವಾಮೀಜಿ ಎಂದು ಹೇಳಿಕೊಂಡು ಮಹಿಳೆಯರನ್ನು ನಂಬಿಸುತ್ತಿದ್ದ ಸಣ್ಣ ಈರಪ್ಪ ಜಮ್ಮಣ್ಣ ಹಾಗೂ ಆತನ ಸಹಚರರಾಗಿರುವ ಬಸಪ್ಪ ಸಿದ್ದಗಿರಿ ಬೀಳಗಿ, ಈರಪ್ಪ ಬಂಡೆಪ್ಪ ಜಿರಲಿ ಮತ್ತು ಪವನ್ ಈರಪ್ಪ ಜಿರಳಿ ಎಂಬುವವರನ್ನು ಬಂಧಿಸಲಾಗಿದೆ.
ಇವರು ಉಡದ ಜನನಾಂಗವನ್ನು ಆಂಧ್ರಪ್ರದೇಶದಲ್ಲಿರುವ ಬುಡಕಟ್ಟು ಜನರಿಂದ ತರಿಸಿಕೊಳ್ಳುತ್ತಿದ್ದರು. ಸಣ್ಣ ಈರಪ್ಪ ತಾನು ಸ್ವಾಮೀಜಿ ಎಂದು ಹೇಳಿಕೊಂಡು ದೇವಸ್ಥಾನದ ಬಳಿ ಕುಳಿತುಕೊಳ್ಳುತ್ತಿದ್ದ. ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯರಿಗೆ ಇದನ್ನು ಖರೀದಿಸುವಂತೆ ಹೇಳುತ್ತಿದ್ದ.
ಅಲ್ಲಿಯೇ ಸಮೀಪದಲ್ಲಿ ಈರಪ್ಪ ಮತ್ತು ಆತನ ಮಕ್ಕಳು ಇದನ್ನು ಮಾರುತ್ತಿದ್ದರು. ಅದನ್ನು ಮಹಿಳೆಯರು ಖರೀದಿಸಿದ ಮೇಲೆ ಅದಕ್ಕೆ ಪೂಜೆ ಮಾಡಿ ನೀಡುತ್ತಿದ್ದ.
ಇದರ ಖಚಿತ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಬಂಧಿಸಿದ್ದಾರೆ. ಈ ಬಂಧಿತರಿಂದ ಒಟ್ಟು 79 ಉಡದ ಅಂಗವನ್ನು ವಶಪಡಿಸಿಕೊಂಡಿದ್ದಾರೆ.