16 ಬಾರಿ ಬಂಧಿಸಿದ್ದ ಪೊಲೀಸ್​ ಅಧಿಕಾರಿಗೇ ಕಿಡ್ನಿ ಕೊಟ್ಟು ಕಾಪಾಡಿದಳು!

kidney
Published on

ಅಲಬಮಾ (ಅಮೆರಿಕ): ಈಕೆಯ ಹೆಸರು ಜಸ್ಲಿನ್ ಜೆಮ್ಸ್. 40 ವರ್ಷದ ಈಕೆ ಮಾದಕ ವ್ಯಸನಿ ಮಾತ್ರವಲ್ಲದೇ ಕಳ್ಳಿ ಕೂಡ. ಅದಕ್ಕಾಗಿಯೇ ಪೊಲೀಸರ ದಾಖಲೆಗಳಲ್ಲಿ ಇವಳು 'ಮೋಸ್ಟ್​ ವಾಂಟೆಡ್​'.

2007ರಿಂದ 2012ರ ಅವಧಿಯಲ್ಲಿ ಮಾದಕ ವ್ಯಸನ ಹಾಗೂ ಕಳ್ಳತನಕ್ಕೆ ಸಂಬಂಧಿಸಿದಂತೆ 16 ಬಾರಿ ಪೊಲೀಸರು ಈಕೆಯನ್ನು ಬಂಧಿಸಿದ್ದರು. ಮಾದಕ ವ್ಯಸನದ ಕಾರಣದಿಂದಲೇ ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಂಡಿದ್ದ ಈಕೆ, ಪೊಲೀಸರ ಪದೇ ಪದೇ ಬಂಧನದಿಂದಾಗಿ ಕೆಲಸವನ್ನು ಕಳೆದುಕೊಂಡಿದ್ದಳು.

ಈಕೆಯನ್ನು ವ್ಯಸನಮುಕ್ತ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಅಲ್ಲಿ ಚಿಕಿತ್ಸೆ ಪಡೆದು ಬಂದು ಸ್ವಲ್ಪ ದಿನ ವ್ಯಸನಗಳಿಂದ ದೂರವಾಗಿರುತ್ತಿದ್ದ ಈಕೆ ಪುನಃ ವ್ಯಸನಕ್ಕೆ ಅಂಟಿಕೊಳ್ಳುತ್ತಿದ್ದಳು. ಇದೇ ಸಂದರ್ಭದಲ್ಲಿ ಹಲವಾರು ಕಳ್ಳತನದಲ್ಲಿಯೂ ಭಾಗಿಯಾಗಿ ಪುನಃ ಜೈಲಿಗೆ ಸೇರುತ್ತಿದ್ದಳು.

ಅಲ್ಲಿ ಆಕೆಗೆ ಪದೇ ಪದೇ ಮನವೊಲಿಸುವ ಯತ್ನ ನಡೆಯುತ್ತಿದ್ದಾದರೂ ಪರಿಸ್ಥಿತಿ ಮಾತ್ರ ಸಂಪೂರ್ಣ ಸುಧಾರಿಸರಲಿಲ್ಲ. ಆದರೆ ಸ್ವಲ್ಪ ಮಟ್ಟಿಗೆ ಮಾದಕ ವ್ಯಸನದಿಂದ ಹೊರಗಡೆ ಬಂದಿದ್ದಾಳೆ ಈಕೆ. ಕೊನೆಯದಾಗಿ 2012ರಲ್ಲಿ ಈಕೆ ಬಂಧನಕ್ಕೆ ಒಳಗಾಗಿ ಜೈಲು ಶಿಕ್ಷೆ ಅನುಭವಿಸಿ ವರ್ಷಗಳ ನಂತರ ಬಿಡುಗಡೆ ಹೊಂದಿದ್ದಾಳೆ.

ಇದೀಗ ಸದ್ಯ ಜೈಲಿನಲ್ಲಿ ಹೊರಗೆ ಇರುವ ಜಸ್ಲಿನ್ ಜೆಮ್ಸ್, ಫೇಸ್​ಬುಕ್​ ನೋಡುತ್ತಿದ್ದಾಗ, ತನ್ನನ್ನು ಬಂಧಿಸಿರುವ ಪೊಲೀಸರ ಬಗ್ಗೆ ಬಂದಿರುವ ಪ್ರಕಟಣೆ ನೋಡಿದ್ದಾಳೆ. ಪದೇ ಪದೇ ಬಂಧನದಿಂದ ತೀರಾ ಪರಿಚಿತವಾಗಿರುವ ಈ ಪೊಲೀಸ್​ ಅಧಿಕಾರಿ ಟೇರಲ್ ಪಾಟರ್ ಬಗ್ಗೆ ಏನು ಬಂದಿದೆಯಪ್ಪ ಎಂದು ಓದಿದಾಗ ಅದರಲ್ಲಿ ಅವರಿಗೆ ತುರ್ತಾಗಿ ಮೂತ್ರಪಿಂಡದ ಅವಶ್ಯಕತೆ ಇರುವ ಬಗ್ಗೆ ಬಂದಿದ್ದನ್ನು ಓದಿದ್ದಾಳೆ.

ಪೊಲೀಸ್​ ಅಧಿಕಾರಿಯ ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣಗಳ ನಡುವೆ ಅವರು ಹೋರಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಕಿಡ್ನಿಯ ಅವಶ್ಯಕತೆ ಇದೆ ಎಂದು ಪ್ರಕಟಣೆಯಲ್ಲಿ ಇತ್ತು.

ಬಹುಶಃ ಬೇರೆ ಯಾರೇ ಆಗಿದ್ದರೂ, ತಪ್ಪು ತಮ್ಮದೇ ಇದ್ದರೂ ಶಿಕ್ಷಿಸಿದ ಅಧಿಕಾರಿಗೆ ಸರಿಯಾದ ಶಾಸ್ತಿಯಾಯಿತು ಎಂದುಕೊಳ್ಳುತ್ತಿದ್ದರೇನೋ. ಆದರೆ ಜಸ್ಲಿನ್ ಜೆಮ್ಸ್ ಹಾಗೆ ಮಾಡಲಿಲ್ಲ.

ತನ್ನನ್ನು ಬಂಧಿಸಿದ್ದನ್ನಾಗಲೀ, ಶಿಕ್ಷೆಗೆ ಗುರಿಪಡಿಸಿದ್ದನ್ನಾಗಲೀ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಪೊಲೀಸ್​ ಅಧಿಕಾರಿ ಅಡ್ಮಿಟ್​ ಆಗಿರುವ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ತನ್ನ ಒಂದು ಕಿಡ್ನಿಯನ್ನು ದಾನ ಮಾಡುವುದಾಗಿ ಹೇಳಿದ್ದಾಳೆ. ಅಲ್ಲಿಯ ನಿಯಮದ ಪ್ರಕಾರ, ಎಲ್ಲ ರೀತಿಯ ಪರೀಕ್ಷೆಗೆ ಒಳಪಟ್ಟ ನಂತರ ಆಕೆಯ ಕಿಡ್ನಿ, ಪೊಲೀಸ್​ ಅಧಿಕಾರಿಗೆ ಮ್ಯಾಚ್​ ಆಗುವುದಾಗಿ ವೈದ್ಯರು ತಿಳಿಸಿ, ಆಪರೇಷನ್​ ಮಾಡಿ ಈಕೆಯ ಕಿಡ್ನಿಯನ್ನು ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಪೊಲೀಸ್ ಅಧಿಕಾರಿ ಚೇತರಿಸಿಕೊಂಡಿದ್ದಾರೆ. ಮಹಿಳೆಯ ಮಾನವೀಯ ಗುಣಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ನಾನು ಇಷ್ಟು ವರ್ಷ ಜೀವನದಲ್ಲಿ ಬರೀ ಕೆಟ್ಟ ಕೆಲಸಗಳನ್ನೇ ಮಾಡುತ್ತಾ ಬಂದಿದ್ದೇನೆ. ಅವುಗಳಿಂದ ಹೊರಬರಲು ಮನಸ್ಸು ಹಾತೊರೆಯುತ್ತಿತ್ತು. ಇದೀಗ ಒಂದು ಒಳ್ಳೆಯ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಈಗ ಜೀವನದಲ್ಲಿ ಏನೋ ಖುಷಿ ಎನಿಸುತ್ತಿದೆ. ಒಂದು ಕಿಡ್ನಿಯಿಂದ ನನಗೇನೂ ಸಮಸ್ಯೆ ಆಗುತ್ತಿಲ್ಲ. ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದಿದ್ದಾಲೆ ಜಸ್ಲಿನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net