ಗ್ಯಾಂಗ್‌ರೇಪ್‌ ಆಯ್ತೆಂದು ಯುವತಿ ದೂರು: ಇದ್ದ ಕೆಲಸವೆಲ್ಲಾ ಬಿಟ್ಟು ತನಿಖೆ ಮಾಡಿದ ಪೊಲೀಸರಿಗೆ ಕಾದಿತ್ತು ಭಾರಿ ಶಾಕ್‌

marriage
Published on

ನಾಗ್ಪುರ ​(ಮಹಾರಾಷ್ಟ್ರ): ಪೊಲೀಸ್‌ ಇಲಾಖೆ ಮೇಲೆ ಇಲ್ಲಸಲ್ಲದ ಆರೋಪ ಮಾಡುವವರೇ ಹೆಚ್ಚಿನ ಮಂದಿ. ಅದರಲ್ಲಿಯೂ ಅತ್ಯಾಚಾರದಂಥ ಪ್ರಕರಣಗಳು ದಾಖಲಾದಾಗ ಆರೋಪಿಗಳನ್ನು ಹಿಡಿಯುವಲ್ಲಿ ಸ್ವಲ್ಪ ವಿಳಂಬವಾದರೂ ಕೆಂಗಣ್ಣಿಗೆ ಗುರಿಯಾಗುವವರು ಪೊಲೀಸರೇ. ಆದರೆ ತನ್ನ ಮೇಲೆ ಗ್ಯಾಂಗ್‌ರೇಪ್‌ ಆಗಿದೆ ಎಂದು ಯುವತಿಯೊಬ್ಬಳು ದೂರು ಕೊಟ್ಟಾಗ ಆಕೆಗೆ ಶೀಘ್ರದಲ್ಲಿ ನ್ಯಾಯ ಕೊಡಿಸಲು ಸಾವಿರಾರು ಮಂದಿ ತನಿಖೆ ನಡೆಸಿ ಕೊನೆಗೆ ಬೇಸ್ತು ಬಿದ್ದ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವ ಈ ಘಟನೆಯಿಂದ ಇಡೀ ಪೊಲೀಸ್‌ ಇಲಾಖೆ ಮಾತ್ರವಲ್ಲದೇ ಗ್ಯಾಂಗ್‌ರೇಪ್‌ ತನಿಖೆ ಮಾಡಿದ ಸಿಬ್ಬಂದಿ ಸುಸ್ತಾಗಿದ್ದಾರೆ.

ಆಗಿದ್ದೇನೆಂದರೆ 19 ವರ್ಷದ ಯುವತಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ನಾಗ್ಪುರ್​​ದ ಚಿಖಾಲಿ ಸಮೀಪ ನಾನು ಸಂಗೀತ ಅಭ್ಯಾಸಕ್ಕಾಗಿ ತರಗತಿಗೆ ತೆರಳುತ್ತಿದ್ದಾಗ ವ್ಯಾನ್​​ನಲ್ಲಿ ಬಂದ ಯುವಕರು ನನ್ನನ್ನು ಬಲವಂತವಾಗಿ ಎಳೆದುಕೊಂಡು ಹೋದರು. ನಂತರ ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದರು ಎಂದು ಹೇಳಿದ್ದಳು.

ಇದನ್ನು ನಂಬಿದ ‍ಪೊಲೀಸರು ಇರುವ ಕೆಲಸವನ್ನೆಲ್ಲಾ ಬದಿಗಿಟ್ಟು, ಈಕೆಗೆ ಶೀಘ್ರದಲ್ಲಿ ನ್ಯಾಯ ಕೊಡಿಸಬೇಕು ಎಂದು ಕಾರ್ಯಪ್ರವೃತ್ತರಾದರು. ನಾಗ್ಪುರ್​​ ಪೊಲೀಸ್​ ಕಮಿಷನರ್​​ ಅಮಿತೇಶ್ ಕುಮಾರ್​ ಸೇರಿದಂತೆ ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ತನಿಖೆಯಲ್ಲಿ ಭಾಗಿಯಾದರು. ಈ ಯುವತಿ ಹೇಳಿದ ಸ್ಥಳಗಳಲ್ಲಿ ಇರುವ 250ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಾಯಿತು. ಆದರೆ ಎಲ್ಲಿಯೂ ಅಪಹರಣದ ಕುರುಹು ಸಿಗಲಿಲ್ಲ.

ಇದರ ನಡುವೆಯೇ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವರದಿಯನ್ನು ಕೂಡ ಶೀಘ್ರದಲ್ಲಿ ನೀಡಲಾಯಿತು. ಆದರೆ ಅದರಲ್ಲಿ ಅತ್ಯಾಚಾರ ನಡೆದೇ ಇಲ್ಲ ಎಂದು ವರದಿ ಹೇಳಿತು.

ಇದರಿಂದ ಅನುಮಾನಗೊಂಡ ಪೊಲೀಸರು ಯುವತಿಯನ್ನು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿದಾಗ, ಹೆದರಿದ ಯುವತಿ ಬಾಯಿ ಬಿಟ್ಟಳು. ಅದೇನೆಂದರೆ ಆಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಮನೆಯಲ್ಲಿ ಈ ಮದುವೆಗೆ ವಿರೋಧ ವ್ಯಕ್ತಪಡಿಸಬಹುದು ಎಂದು ಅನ್ನಿಸಿದೆ. ಅದಕ್ಕಾಗಿ ತನ್ನನ್ನು ಯಾರಾದರೂ ರೇಪ್‌ ಮಾಡಿದ್ದಾರೆ ಎಂದು ಸುದ್ದಿಯಾದರೆ ಯಾರೂ ತನ್ನನ್ನು ಮದುವೆಯಾಗುವುದಿಲ್ಲ. ಆಗ ತಾನು ಪ್ರೀತಿಸಿದವನ ಜತೆ ಮದುವೆಯಾಗಬಹುದು ಎಂದು ಪ್ಲ್ಯಾನ್‌ ಮಾಡಿದ್ದಾಳೆ. ಇದರಿಂದ ಇಂಥದ್ದೊಂದು ಕಟ್ಟುಕಥೆ ಕಲ್ಪಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net