ಸಲ್ಮಾನ್​ನಿಂದ ಸೋನಮ್‌ವರೆಗೂ ಇವರೇ ಬಾಡಿಗಾರ್ಡ್​! ತೆರೆಮರೆ ನಾಯಕಿಯರ ಕಣ್ಣೀರ ದಿನಗಳು...

bodyguards
Published on

ಮುಂಬೈ: ಬಾಲಿವುಡ್ ತಾರೆಯರು ತಮ್ಮ ಚಲನಚಿತ್ರಗಳ ಶೂಟಿಂಗ್​ಗೆ ತೆರಳುವುದಿದ್ದರೆ, ಯಾವುದೇ ಸಭೆ ಸಮಾರಂಭಗಳಿಗೆ ಹೋಗುವುದಿದ್ದರೆ, ಚಿತ್ರಗಳ ಪ್ರಮೋಷನ್​, ಜಾಹೀರಾತು ನೀಡಿಕೆ... ಒಟ್ಟಿನಲ್ಲಿ ಹೇಳುವುದಾದರೆ ಅವರು ಮನೆಯಿಂದ ಹೊರಬಂದರು ಎಂದರೆ ಅವರಿಗೆ ಅಂಗರಕ್ಷಕರು ಅರ್ಥಾತ್​ ಬಾಡಿಗಾರ್ಡ್​ಗಳ ಅವಶ್ಯಕತೆ ಇದ್ದೇ ಇರುತ್ತದೆ.

ಅವರ ಹುಚ್ಚು ಅಭಿಮಾನಿಗಳಿಂದ ರಕ್ಷಣೆ ಮಾಡುವುದಕ್ಕಾಗಿ ಈ ತಾರೆಯರ ಸುತ್ತಲೂ ವಿಐಪಿಗಳಂತೆ ಬಾಡಿಗಾರ್ಡ್​ಗಳು ಇರಲೇಬೇಕು. ಚಿತ್ರನಟರಿಗೆ ರಾಜಕಾರಣಿಗಳಂತೆ ಸದಾ ಭದ್ರತೆ ನೀಡಬೇಕು. ಇಲ್ಲದಿದ್ದರೆ ಅಭಿಮಾನಿಗಳ ಹುಚ್ಚಾಟದಿಂದಾಗಿ ಅವರ ಜೀವಕ್ಕೇ ಅಪಾಯ ಬರುವ ಸಾಧ್ಯತೆಯೂ ಇದೆ.

ಆದ್ದರಿಂದ ಚಿತ್ರತಾರೆಯರಿಗೆ ಬಾಡಿಗಾರ್ಡ್​ ಎನ್ನುವವರು ಅವರ ಜೀವರಕ್ಷಕರು ಇದ್ದಂತೆ. ಆದರೆ ಸಾಮಾನ್ಯವಾಗಿ ಬಾಡಿಗಾರ್ಡ್​ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ಪುರುಷರಷ್ಟೇ. ಆದರೆ ಸತ್ಯಸಂಗತಿ ಇದಲ್ಲ. ಇತ್ತೀಚಿನ ವರ್ಷಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬಾಡಿಗಾರ್ಡ್​ ಆಗಿರುವುದು ವಿಶೇಷ. ಆದರೆ ಇವರ ಬಗ್ಗೆ ಮಾತ್ರ ಎಲ್ಲಿಯೂ ವರದಿಯಾಗುವುದೇ ಇಲ್ಲ. ನಿಜವಾಗಿಯೂ ಈ ಅಂಗರಕ್ಷಕಿಯರೇ ತೆರೆಮರೆಯ ನಾಯಕಿಯರು.

ಆದರೆ ಈ ನಾಯಕಿಯರ ಗೋಳು ಹೇಳತೀರದಾಗಿದೆ. ಕರೊನಾ ಇವರ ಬದುಕನ್ನೇ ಕಸಿದುಕೊಂಡು ಬಿಟ್ಟಿದೆ.

ಕರೊನಾ ಹಿನ್ನೆಲೆಯಲ್ಲಿ ಕೆಲ ತಿಂಗಳು ಚಿತ್ರರಂಗವೇ ಸ್ತಬ್ಧವಾಗಿತ್ತು. ಇದೀಗ ಶೂಟಿಂಗ್​ಗಳೂ ಹೆಚ್ಚಿಗೆ ಇಲ್ಲ, ಮಾತ್ರವಲ್ಲದೇ ಸಮಾರಂಭಗಳಿಗೂ ಕಡಿವಾಣ ಬಿದ್ದುದರಿಂದ ಈ ಅಂಗರಕ್ಷಕಿಯರು ಅಕ್ಷರಶಃ ಬೀದಿಗೆ ಬಂದಿದ್ದಾರೆ.

ಕರೊನಾ ನಿಯಮಗಳ ಹಿನ್ನೆಲೆಯಲ್ಲಿ ಈ ಚಿತ್ರನಟ-ನಟಿಯರು ಶೂಟಿಂಗ್​ಗೆ ಹೋಗುವುದು, ಸಭೆ ಸಮಾರಂಭಗಳಿಗೆ ತೆರಳುವುದು ತೀರಾ ಅಪರೂಪವಾಗಿದೆ. ಅದರಲ್ಲಿಯೂ ಔಟ್​ ಸ್ಟೇಷನ್​ ಶೂಟಿಂಗ್​ಗಳಿಗಂತೂ ಸದ್ಯ ಬ್ರೇಕ್​ ಬಿದ್ದಿದೆ.

ಈಗ ಹೋಗುತ್ತಿರುವ ಬೆರಳೆಣಿಕೆಯಷ್ಟು ಸಭೆ-ಸಮಾರಂಭಗಳಿಗೆ ಮೊದಲ ಪ್ರಾಶಸ್ತ್ಯ ಸಿಗುತ್ತಿರುವುದು ಪುರುಷ ಬಾಡಿಗಾರ್ಡ್​ಗೆ ಆಗಿರುವ ಹಿನ್ನೆಲೆಯಲ್ಲಿ ಮಹಿಳೆಯರ ಗೋಳು ಹೇಳತೀರದಾಗಿದೆ.

ತಮ್ಮ ನೋವನ್ನು ಹೇಳಿಕೊಂಡಿರುವ 42 ವರ್ಷದ ಫಾಹ್ಮಿಡಾ ಅನ್ಸಾರಿ, ನಾನು ಸಿಂಗಲ್​ ಪೇರೆಂಟ್​, 17 ವರ್ಷಗಳಿಂದ ಮಗಳೊಟ್ಟಿಗೆ ಇದ್ದೇನೆ. ನಾನೊಬ್ಬಳೇ ದುಡಿದರಷ್ಟೇ ಬದುಕು ಸಾಗುತ್ತದೆ. ಆದರೆ ಕರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದೇನೆ, ಸದ್ಯ ಅಂಗರಕ್ಷಕಿಯರಿಗೆ ಕೆಲಸ ಸಿಗುವ ಯಾವುದೇ ಸಾಧ್ಯತೆ ಇಲ್ಲ. ಬದುಕು ನಡೆಸುವುದೇ ಕಷ್ಟವಾಗಿದೆ ಎಂದಿದ್ದಾರೆ.

ಮಗಳ ಸಲುವಾಗಿ ಮತ್ತೆ ಮದುವೆಯಾಗಿಲ್ಲ. ಮಾಜಿ ಪತಿಯಿಂದ ಜೀವನಾಂಶವನ್ನೂ ಪಡೆಯುತ್ತಿಲ್ಲ. ಕೆಲಸಕ್ಕಾಗಿ ಹುಡುಕುತ್ತಿದ್ದಾಗ ಅಂಗರಕ್ಷಕಿ ಹುದ್ದೆಯ ಬಗ್ಗೆ ತಿಳಿಯಿತು. ಇದು ಸವಾಲಿನ ಕೆಲಸವೇ. ಅದರಲ್ಲಿಯೂ ಹೆಣ್ಣುಮಕ್ಕಳಿಗಂತೂ ಕಠಿಣವೇ. ಆದರೆ ನನ್ನಂಥ ಎಷ್ಟೋ ಹೆಣ್ಣುಮಕ್ಕಳು ಈ ಸವಾಲಿನ ಕೆಲಸವನ್ನು ಒಪ್ಪಿಕೊಂಡಿದ್ದಾರೆ. ಅದು ಅವರ ಅನಿವಾರ್ಯತೆ. ಆದರೆ ಮಹಿಳೆಯರ ಕರ್ತವ್ಯನಿಷ್ಠೆಯಿಂದಾಗಿ ನಮಗೇ ಹೆಚ್ಚು ಡಿಮಾಂಡ್​ ಇರುವುದೂ ನಿಜವೇ. ಆದರೆ ಕರೊನಾ ಎಲ್ಲವನ್ನೂ ಕಸಿದುಕೊಂಡಿದೆ ಎಂದರು. ಇವರು ಎಲ್ಲಾ ಪ್ರಸಿದ್ಧ ಹೀರೋ- ಹೀರೊಯಿನ್​ಗಳಿಗೂ ಬಾಡಿಗಾರ್ಡ್​ ಆಗಿ ಕೆಲಸ ಮಾಡಿದ್ದಾರೆ.

ಇನ್ನೋರ್ವ ಬಾಡಿಗಾರ್ಡ್​ ಆಗಿರುವ ಜರೀನ್, ನನ್ನ ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಾನು ಅವರನ್ನು ನೋಡಿಕೊಳ್ಳಬೇಕಿದೆ. ನನ್ನ ಕೆಲಸ ಬಿಟ್ಟು ಬೇರೆ ಯಾವುದೇ ಆದಾಯ ಇಲ್ಲ. ಆದರೆ ಇದೀಗ ಅಕ್ಷರಶಃ ಬೀದಿಪಾಲಾಗಿದ್ದೇವೆ ಎಂದಿದ್ದಾರೆ. ಇವರು ಕೆಲ ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದಾರೆ.

ಮೂರು ವರ್ಷಗಳಿಂದ ಅಂಗರಕ್ಷಕಿಯಾಗಿ ಕೆಲಸ ಮಾಡುತ್ತಿರುವ ಸುನೀತಾ ನಿಕಾಲ್ಜೆ ಅವರದ್ದೂ ಇದೇ ಸಮಸ್ಯೆ. ಕೆಲವು ವರ್ಷಗಳ ಹಿಂದೆ ಇವರ ಪತಿಗೆ ಅಪಘಾತವೊಂದರಲ್ಲಿ ತಲೆಗೆ ಗಾಯದಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಇವರು ಅಂಗರಕ್ಷಕಿ ಕೆಲಸ ಮಾಡಿದರಷ್ಟೇ ಅವರ ಸಂಸಾರ ನಡೆಯುವುದು. ಈಗ ಅವರಿಗೂ ಕೆಲಸವಿಲ್ಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net