

ನವದೆಹಲಿ: ‘ಕಿಲ್ ನರೇಂದ್ರ ಮೋದಿ’ (ನರೇಂದ್ರ ಮೋದಿಯನ್ನು ಸಾಯಿಸಿ)...
ಹೀಗೆಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ ಐಎ) ಇ-ಮೇಲ್ ಬಂದಿದ್ದು, ಇದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದನ್ನು ಕಳುಹಿಸಿದವರು ಯಾರು ಎಂಬ ಬಗ್ಗೆ ತನಿಖೆ ಶುರುವಾಗಿದೆ.
ಕಳೆದ ಆಗಸ್ಟ್ 8ರಂದೇ ಈ ಮೇಲ್ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ಸದ್ಯ ಪ್ರಧಾನಿಯವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಕೇಂದ್ರ ಗುಪ್ತಚರ ಇಲಾಖೆ ಮತ್ತು ರಕ್ಷಣಾ ಗುಪ್ತಚರ ಇಲಾಖೆಗಳ ಹಿರಿಯ ಪ್ರತಿನಿಧಿಗಳನ್ನು ಹೊಂದಿರುವ ಬಹು ಸಂಸ್ಥೆ ಸಮನ್ವಯ ಕೇಂದ್ರವು (ಎಂಎಸಿ) ಈ ಇ-ಮೇಲ್ ಎಲ್ಲಿಂದ ಬಂದಿರುವುದು, ಕಳುಹಿಸಿದವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಶುರು ಮಾಡಿದೆ.
ಭಯೋತ್ಪಾದನೆ ಮಟ್ಟ ಹಾಕುವುದು ಸೇರಿದಂತೆ ಭಾರತದ ತಂಟೆಗೆ ಬರುತ್ತಿರುವ ದೇಶಗಳಿಗೆ ಬುದ್ಧಿ ಕಲಿಸಲು ಇದಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕೆಲವು ದೇಶಗಳ ಕೆಂಗಣ್ಣಿಗೆ ಪ್ರಧಾನಿ ಮೋದಿ ಅವರು ಗುರಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ.
ಅತ್ತ ಉಗ್ರ ಪಾಕಿಸ್ತಾನ, ಇತ್ತ ಕುತಂತ್ರಿ ಚೀನಾಕ್ಕೆ ಭಾರತ ಹಿಂದೆಲ್ಲೂ ಇಲ್ಲದಷ್ಟು ಕಾಡತೊಡಗಿದೆ. ಇದರ ಜತೆಜತೆಗೇ ಹೊರದೇಶಗಳಲ್ಲಿ ಮಾತ್ರವಲ್ಲದೇ ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಸಹಿಸದ ಕೆಲ ದುಷ್ಟ ಶಕ್ತಿಗಳೂ ಭಾರತದಲ್ಲಿಯೇ ಇದ್ದು ಸಂಚು ರೂಪಿಸಿರುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಅಲ್ಲಗಳೆಯುತ್ತಿಲ್ಲ.
ಈ ನಿಟ್ಟಿನಲ್ಲಿ ಎಲ್ಲಾ ಆಯಾಮಗಳಿಂದಲೂ ತನಿಖೆ ಶುರು ಮಾಡಲಾಗಿದೆ. 'ylalwani12345@gmail.com' ಎಂಬ ವಿಳಾಸದಿಂದ ಈ ಇ- ಮೇಲ್ ಬಂದಿದೆ.
ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಕೇಂದ್ರ ತನಿಖಾ ಗುಪ್ತಚರ ಸಂಸ್ಥೆಗೆ ವರ್ಗಾಯಿಸಿದೆ. ಸದ್ಯ ಸಿಕ್ಕಿರುವ ಪ್ರಾಥಮಿಕ ತನಿಖೆಯಿಂದ ಇದು ಭಾರತದ ಹೊರಗಿನಿಂದ ಬಂದಿರುವ ಇಮೇಲ್ ಎಂದು ತಿಳಿದುಬಂದಿದೆ. ಆದರೂ ಎಲ್ಲಿಂದ ಬಂದಿರುವುದು, ಯಾರು ಕಳುಹಿಸಿರುವುದು ಎಂಬ ಬಗ್ಗೆ ತನಿಖೆ ಮುಂದುವರೆದಿದೆ.