ಹುಲಿಯಾದ ನಾಯಿ- ಬೇಸ್ತುಬಿದ್ದ ಜನ: ಕುಕೃತ್ಯ ಎಸಗಿದವರ ಹುಡುಕಿಕೊಟ್ಟರೆ ಸೂಕ್ತ ಬಹುಮಾನ

dog
Published on

ಮಲೇಷಿಯಾ: ಶಿವಮೊಗ್ಗ ಸೇರಿದಂತೆ ಮಲೆನಾಡಿನ ಕೆಲವು ಕಡೆಗಳಲ್ಲಿ ಮಂಗನಹಾವಳಿ ವಿಪರೀತ ಇದೆ. ಬೆಳೆಗಳನ್ನು ಸಂಪೂರ್ಣ ಹಾಳುಮಾಡುವ ಮಂಗಗಳನ್ನು ಓಡಿಸಲು ಮಲೆನಾಡಿಗರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ.

ಏನೇ ಉಪಾಯ ಮಾಡಿದರೂ ಅದು ಕೆಲವು ದಿನಗಳು ಮಾತ್ರ. ನಂತರ ಮಂಗಗಳು ಹೆದರುವುದೇ ಇಲ್ಲ. ಅದೇ ಕಾರಣಕ್ಕೆ ಕಳೆದ ವರ್ಷ ಶಿವಮೊಗ್ಗದ ಕೃಷಿಕರೊಬ್ಬರು ತಮ್ಮ ಮನೆಯ ನಾಯಿಗೆ ಹುಲಿಯಂತೆ ಚಿತ್ರಬಿಡಿಸಿ ಮಂಗಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಆಗ ಬಹಳ ಸುದ್ದಿ ಕೂಡ ಆಗಿ, ಹಲವರು ಈ ಪ್ರಯತ್ನವನ್ನು ಮಾಡಿದ್ದರು.

ಕೃಷಿಕರ ಉಪಾಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ವಿಷಯವನ್ನು ಇಲ್ಲಿ ಪ್ರಸ್ತಾಪ ಮಾಡಲು ಕಾರಣವೆಂದರೆ ಮಲೇಷಿಯಾದಲ್ಲಿ ಕೂಡ ಅಂಥದ್ದೇ ಘಟನೆ ನಡೆದಿದೆ. ಆದರೆ ಇಲ್ಲಿ ಮೆಚ್ಚುಗೆ ಬದಲು ಇಂಥದ್ದೊಂದು ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡಲು ‘ತಪ್ಪಿತಸ್ಥ’ರ ಹುಡುಕಾಟ ನಡೆದಿದೆ.

ಅಷ್ಟಕ್ಕೂ ಆಗಿರುವುದು ಏನೆಂದರೆ ಇಲ್ಲಿಯ ಬೀದಿ ನಾಯಿಯೊಂದಕ್ಕೆ ಯಾರೋ ಕಪ್ಪು ಪಟ್ಟಿ ಬಳಿದು ಹುಲಿ ರೀತಿ ಕಾಣುವಂತೆ ಮಾಡಿದ್ದರು.

ಇವರು ಈ ರೀತಿ ಮಾಡುವ ಹಿಂದಿದ್ದ ಉದ್ದೇಶ ಜನರನ್ನು ಹೆದರಿಸುವುದಕ್ಕಾಗಿ. ಥೇಟ್‌ ಹುಲಿಯಂತೆ ಕಾಣುತ್ತಿದ್ದ ನಾಯಿಯು ಬೀದಿಬೀದಿಗಳಲ್ಲಿ ಅಲೆದಾಡಿದ ಹಿನ್ನೆಲೆಯಲ್ಲಿ ಜನರು ಬೆಚ್ಚಿಬಿದ್ದು, ಹೌಹಾರಿ ಹೋಗಿದ್ದಾರೆ.

ನಂತರ ಇದು ನಾಯಿ ಎಂದು ತಿಳಿದಿದೆ. ಜನರನ್ನು ಹೆದರಿಸಲು ಈ ರೀತಿ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮಲೇಷಿಯಾ ಸರ್ಕಾರ ಮುಂದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನಾಯಿಯ ಹುಲಿವೇಷದ ಚಿತ್ರ ಅಪ್‌ಲೋಡ್‌ ಮಾಡಲಾಗಿದ್ದು, ಈ ಕೃತ್ಯ ಮಾಡಿದವರನ್ನು ಹುಡುಕಿ ಕೊಟ್ಟರೆ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಘೋಷಿಸಲಾಗಿದೆ.

ಇದಾಗಲೇ ಈ ಚಿತ್ರ ಸಾವಿರಾರು ಶೇರ್‌ಗಳನ್ನು ಕಂಡಿದ್ದು, ಹಲವರು ಕಮೆಂಟ್‌ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net