

ವಾಷಿಂಗ್ಟನ್: ಅಮೆರಿಕದಲ್ಲಿ ರಾಜಕೀಯ ರಂಗೇರಿದೆ. ಬರುವ ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮೇಲ್-ಇನ್ ಮತದಾನದಲ್ಲಿ ಭಾರಿ ಮೋಸ ಆಗುವ ಸಾಧ್ಯತೆ ಇದೆ ಎಂದು ಪದೇ ಪದೇ ಹೇಳುತ್ತಲೇ ಬಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವಂತೆ ಒತ್ತಾಯ ಮಾಡುತ್ತಲೇ ಇದ್ದರು.
ಆದರೆ ಇದೀಗ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆ ಸಂಜೆ ಟ್ರಂಪ್ ನಿರ್ಣಾಯಕ ರಾಜಕೀಯದಲ್ಲಿ ನಿರ್ಣಾಯ ಯುದ್ಧಭೂಮಿ ಎಂದೇ ಬಿಂಬಿತವಾಗಿರುವ ಉತ್ತರ ಕೆರೊಲಿನಾದ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು, ‘ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಎರಡು ಬಾರಿ ಮತ ಚಲಾಯಿಸಲು ಪ್ರಯತ್ನಿಸಿ. ಒಮ್ಮೆ ಮೇಲ್ ಮೂಲಕ ಮತ್ತು ಒಮ್ಮೆ ವೈಯಕ್ತಿಕವಾಗಿ’ ಎಂದು ಬಹಿರಂಗವಾಗಿ ಹೇಳುವ ಮೂಲಕ ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇವರ ಈ ಹೇಳಿಕೆಗೆ ಈಗ ಭಾರಿ ವಿರೋಧ ವ್ಯಕ್ತವಾಗಿದೆ.
ಉತ್ತರ ಕೆರೊಲಿನಾದ ವಿಲ್ಮಿಂಗ್ಟನ್‌ನಲ್ಲಿ ಡಬ್ಲ್ಯುಇಸಿಟಿ-ಟಿವಿಗೆ ನೀಡಿರುವ ಸಂದರ್ಶನದಲ್ಲಿ ಜನರನ್ನು ಉದ್ದೇಶಿಸಿ ಟ್ರಂಪ್ ಇ ಮೇಲ್ ಮೂಲಕದ ಮತದಾನದಲ್ಲಿ ತಮಗೆ ಭರವಸೆ ಇಲ್ಲದಿರುವ ಹಿನ್ನೆಲೆಯಲ್ಲಿ ಮತದಾರರು ಎರಡು ಬಾರಿ ಮತ ಚಲಾಯಿಸಬೇಕು ಎಂದು ಹೇಳಿದ್ದಾರೆ.
ಕರೊನಾ ವೈರಸ್ ಹಿನ್ನೆಲೆಯಲ್ಲಿ ಇ-ಮೇಲ್ ಮತದಾನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರ ಬಗ್ಗೆ ಟ್ರಂಪ್ ಎಷ್ಟೇ ವಿರೋಧ ವ್ಯಕ್ತಪಡಿಸಿದ್ದರೂ, ತಜ್ಞರು ಇದರಿಂದ ವಂಚನೆ ಆಗುವುದಿಲ್ಲ. ಎಲ್ಲ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ, ವಂಚನೆಗೆ ಅವಕಾಶವೇ ಇಲ್ಲ ಎಂದಿದ್ದಾರೆ.
ಆದರೆ ಇದರ ಬಗ್ಗೆ ಏನೇ ಹೇಳಿದರೂ ಟ್ರಂಪ್‌ಗೆ ನಂಬಿಕೆ ಇಲ್ಲ. ತಮಗೆ ಬಂದಿರುವ ಮತಗಳನ್ನು ವಿರೋಧಿಗಳು ಕದಿಯುತ್ತಾರೆ ಎನ್ನುವುದು ಅವರ ಬಲವಾದ ನಂಬಿಕೆ.
ವಿಪರ್ಯಾಸ ಎಂದರೆ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುವುದು ಕಾನೂನುಬಾಹಿರ. ಇದಕ್ಕೆ ಭಾರಿ ಶಿಕ್ಷೆಯೂ ಇದೆ. ಇದೇ ಕಾರಣಕ್ಕೆ ಟ್ರಂಪ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.