ಪುನೀತ್‌ ಸಾವಿನ ನಂತರ ಎಚ್ಚೆತ್ತುಕೊಂಡ ಕೇರಳ ಸರ್ಕಾರ: ಜಿಮ್‌ಗಳಲ್ಲಿ ಹೊಸ ನಿಯಮ

gym
Published on

ತಿರುವನಂತಪುರ: ನಟ ಪುನೀತ್‌ ರಾಜ್‌ಕುಮಾರಿಗೆ ಅವರಿಗೆ ಈ ವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸಲು ಅವರು ಅತಿಯಾಗಿ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದುದೇ ಕಾರಣವೂ ಇರಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಇದಾಗಲೇ ಜಿಮ್‌ನಲ್ಲಿ ಅತಿಹೆಚ್ಚು ವರ್ಕ್‌ಔಟ್‌ ಮಾಡಿದವರು ಹಾಗೂ ಅಲ್ಲಿ ನೀಡುವ ಪಾನೀಯಗಳನ್ನು ಕುಡಿದ ಪರಿಣಾಮವಾಗಿ ಕೆಲವು ಸಾವು ಸಂಭವಿಸಿರುವುದರ ಬಗ್ಗೆ ಇದಾಗಲೇ ತಜ್ಞರು ಹೇಳಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ, ಜಿಮ್‍ಗಳಲ್ಲಿ ಎಇಡಿ (automated external defibrillator) ಉಪಕರಣ ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಜಿಮ್‌ಗಳಲ್ಲಿ ಅಕಸ್ಮಾತ್ತಾಗಿ ಹೃದಯದ ತೊಂದರೆಯಾದರೆ ಅದನ್ನು ಗುರುತಿಸಲು ಈ ಉಪಕರಣ ಸಹಾಯ ಮಾಡುತ್ತದೆ. ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವ ಸಮಯದಲ್ಲಿ ಏಕಾಏಕಿ ಹೃದಯ ಬಡಿತ ನಿಂತರೆ ಅಥವಾ ಹೃದಯಕ್ಕೆ ಯಾವುದೇ ಸಮಸ್ಯೆಯಾದರೂ ಕೂಡಲೇ ಉಪಚಾರ ಮಾಡಲು ಅನುಕೂಲವಾಗುವ ಉಪಕರಣ ಇದಾಗಿದೆ.

ಜಿಮ್‌ ಮಾತ್ರವಲ್ಲದೇ, ಕೇರಳದಾದ್ಯಂತ ಇರುವ ಎಲ್ಲ ಕ್ರೀಡಾಂಗಣಗಳು, ಒಳಾಂಗಣಗಳಲ್ಲಿ ಎಇಡಿ ಡಿವೈಸ್‌ ಸೇರಿದಂತೆ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.

ಪುನೀತ್‌ ಅವರ ಸಾವಿನ ನಂತರ ಕೇರಳದ ರಾಯಲ್ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಮಾತನಾಡಿದ ಸಾರಿಗೆ ಸಚಿವ ಅಂಟೋನಿ ರಾಜು, ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್ ಅವರೊಂದಿಗೆ ಚರ್ಚಿಸಿ ಎಲ್ಲೆಡೆ ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು. ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಉಲ್ಲೇಖಿಸಿದ ಸಚಿವರು ಇಂಥ ಸಮಸ್ಯೆ ಮರುಕಳಿಸದಂತೆ ಪ್ರಥಮ ಚಿಕಿತ್ಸೆಯ ಕಿಟ್‌ಗಳು ಹಾಗೂ ಎಇಡಿ ಡಿವೈಸ್‌ ಕಡ್ಡಾಯ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net