

ಬೆಂಗಳೂರು: ಸದಾ ಫಿಟ್ ಆಗಿದ್ದು, ಆರೋಗ್ಯವಂತರಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಇದ್ದಕ್ಕಿದ್ದಂತೆಯೇ ಹೃದಯಾಘಾತವಾಗಿದ್ದು ಹೇಗೆ ಎಂದು ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಎಲ್ಲರ ಜತೆ ಚೆನ್ನಾಗಿಯೇ ಇದ್ದ ಪುನೀತ್ ಒಂದಿನಿತು ಸೂಚನೆ ಕೊಡದೇ ಇದ್ದಕ್ಕಿದ್ದ ಹಾಗೆ ಪ್ರಾಣ ಕಳೆದುಕೊಳ್ಳುತ್ತಾರೆ ಎಂದರೆ ಯಾರಿಗೂ ನಂಬಲು ಸಾಧ್ಯವೇ ಆಗುತ್ತಿಲ್ಲ.
ಆದರೆ ಇದೀಗ ಪುನೀತ್ ಅವರು ಮೃತಪಟ್ಟಿರುವ ರೀತಿ ನೋಡಿದರೆ ಇದೀಗ ಹಿಂದಿನ ಕೆಲವು ಘಟನೆಗಳ ಮೆಲುಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಲವರು ಶೇರ್ ಮಾಡುತ್ತಿದ್ದಾರೆ. ಅದೇನೆಂದರೆ ಜಿಮ್‌ನಲ್ಲಿ ಅತಿಯಾಗಿ ವರ್ಕ್‌ಔಟ್ ಮಾಡುತ್ತಿದುದೇ ಅಪ್ಪು ಅವರ ಜೀವಕ್ಕೆ ಮುಳುವಾಗಿಹೋಯ್ತಾ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಯುವಕನೊಬ್ಬ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದ ವೇಳೆಯೇ ಕುಸಿದುಬಿದ್ದಾಗ ಅದರ ವಿಡಿಯೋ ಭಾರಿ ವೈರಲ್ ಆಗಿತ್ತು. ಆಗ ಹಲವಾರು ತಜ್ಞರು ಈ ಬಗ್ಗೆ ಜನರಿಗೆ ಅದರಲ್ಲಿಯೂ ಹೆಚ್ಚಾಗಿ ಯುವಕರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು.
ಜಿಮ್, ವರ್ಕ್‌ಔಟ್ ಎಲ್ಲವೂ ಒಳ್ಳೆಯದೇ. ಆದರೆ ಸಿಕ್ಸ್‌ಪ್ಯಾಕ್ ಅತಿಯಾದ ಫಿಟ್‌ನೆಸ್ ಮಾಡಲು ಹೋದರೆ ಅದು ಜೀವಕ್ಕೆ ಅಪಾಯ ತಂದೊಡ್ಡಬಹುದು, ಹಾರ್ಟ್ ಎಟ್ಯಾಕ್‌ಗೆ ಇದು ಕಾರಣವಾಗುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪುನೀತ್ ರಾಜ್‌ಕುಮಾರ್ ಅವರು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದ ವೇಳೆಯೇ ಈ ರೀತಿ ಹೃದಯಾಘಾತ ಆಗಿರುವುದಕ್ಕೆ ತಾಳೆ ಹಾಕಿದಾಗ ಇದೇ ಅವರ ಪ್ರಾಣವನ್ನು ಕಸಿದುಕೊಂಡುಬಿಟ್ಟಿತಾ ಎಂಬ ಮಾತುಗಳು ಕೇಳಿಬರುತ್ತಿವೆ.
‘2 ಗಂಟೆಗಳ ಕಾಲ ಜಿಮ್ ಮಾಡಿದ್ದಾರೆ. ಕುಟುಂಬದ ವೈದ್ಯರ ಬಳಿ ಪ್ರಾಥಮಿಕ ಚಿಕಿತ್ಸೆ, ಇಸಿಜಿ ವೇಳೆ ಹೃದಯಾಘಾತ ಆಗಿರುವುದು ಗಮನಕ್ಕೆ ಬಂದಿದೆ. ವಿಕ್ರಮ್ ಆಸ್ಪತ್ರೆಗೆ ಬರುವ ಮೊದಲೇ ಮಾರ್ಗಮಧ್ಯೆಯೇ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಮೂರು ಬಾರಿ ಬದುಕುಳಿಸುವ ಚಿಕಿತ್ಸಾ ಪ್ರಯತ್ನಗಳನ್ನು ನಡೆಸಲಾಯಿತು. ಆದರೂ ಆಗಲಿಲ್ಲ ಎಂದು ಪುನೀತ್ ಅವರಿಗೆ ಚಿಕಿತ್ಸೆ ನೀಡಿದ ವಿಕ್ರಮ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ರಂಗನಾಥ್ ಹೇಳಿದ್ದಾರೆ. ಈ ಮಾತು ಕೂಡ ವರ್ಕ್‌ಔಟ್‌ಗೂ ಪುನೀತ್ ಅವರಿಗೆ ಹೃದಯಾಘಾತ ಆಗಿರುವುದಕ್ಕೂ ಸಂಬಂಧ ಕಲ್ಪಿಸುವಂತಿದೆ.
ಏಕೆಂದರೆ 46 ವರ್ಷದ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಬಹುಪಾಲು ವೇಳೆಯನ್ನು ಜಿಮ್‌ನಲ್ಲಿ ಕಳೆಯುತ್ತಿದ್ದರು. ವರ್ಕ್ಔಟ್ ಎಂದರೆ ಅವರಿಗೆ ಇಷ್ಟವಾಗಿತ್ತು. ಕೆಲವೊಂದು ಸಲ ಕುಟುಂಬಸ್ಥರು ಕೂಡ ಇಷ್ಟೆಲ್ಲಾ ವರ್ಕ್‌ಔಟ್ ಮಾಡಬೇಡ ಎಂದೂ ಸಲಹೆ ಕೊಟ್ಟಿದ್ದರಂತೆ. ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಮನೆಯಲ್ಲಿಯೂ ಹೆಚ್ಚಿನ ವೇಳೆ ವರ್ಕ್‌ಔಟ್‌ನಲ್ಲಿಯೇ ಕಾಲ ಕಳೆಯುತ್ತಿದ್ದ ಅಪ್ಪು, ನಂತರ ಜಿಮ್‌ಗೂ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ಅನೇಕ ನಟರು ತಮ್ಮ ದೇಹ ಸೌಂದರ್ಯಕ್ಕಾಗಿ ಈ ರೀತಿ ಮಾಡುವುದು ಸಾಮಾನ್ಯವಾದರೂ ಅತಿಯಾದ ವರ್ಕ್‌ಔಟ್‌ನಿಂದ ಹೃದಯಕ್ಕೆ ಹಾನಿಯಾಗುತ್ತದೆ, ಮಾತ್ರವಲ್ಲದೇ ದೇಹದ ಫಿಟ್‌ನೆಸ್‌ಗೆ ಜಿಮ್ ಕೇಂದ್ರಗಳಲ್ಲಿ ನೀಡುವ ಪೇಯ ಕೂಡ ಕೆಲವರ ದೇಹಕ್ಕೆ ಅಪಾಯ ತಂದೊಡ್ಡಬಹುದು ಎಂದು ತಜ್ಞರು ಹೇಳುತ್ತಾರೆ. ಇವೆಲ್ಲವನ್ನೂ ನೋಡಿದಾಗ ಆರೋಗ್ಯದಿಂದ ನಗುನಗುತ್ತಾ ಸದಾ ಚಟುವಟಿಕೆಯಿಂದ ಇದ್ದ ಅಪ್ಪು ಹೀಗೆ ಏಕಾಏಕಿ ಅಗಲಿರುವುದಕ್ಕೂ ಅವರ ಅತಿಯಾದ ವರ್ಕ್‌ಔಟ್ ಪ್ರೀತಿಯೇ ಕಾರಣವಾಗಿರಬಹುದು ಎಂದು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.