ದೆಹಲಿಯ ರಾಜ್‍ಪಥದಲ್ಲಿ ಮಿಂಚಲು ಸಜ್ಜಾಗಿದೆ ಕರ್ನಾಟಕದ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು... ಏನಿದರ ವಿಶೇಷತೆ?

stabdhachitra
Published on

ನವದೆಹಲಿ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ದಚಿತ್ರ ಜನವರಿ 26ರ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿದ್ದು, ಸ್ತಬ್ಧಚಿತ್ರ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ದೆಹಲಿಯ ಆರ್ಮಿ ಕಂಟೋನ್ ಮೆಂಟ್ ಪ್ರದೇಶದಲ್ಲಿರುವ ಪರೇಡ್ ಗ್ರೌಂಡ್ ನಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಡೆದಿದೆ. 12 ರಾಜ್ಯಗಳ ಮತ್ತು ವಿವಿಧ ಇಲಾಖೆಗಳ 9 ಸ್ತಬ್ಧಚಿತ್ರ ಗಳು ಪರೇಡ್ ನಲ್ಲಿ ಅನಾವರಣಗೊಳ್ಳಲಿವೆ.

ದಕ್ಷಿಣ ಭಾರತದಿಂದ ಕರ್ನಾಟಕದ ಸ್ತಬ್ದಚಿತ್ರ ಮಾತ್ರ ಆಯ್ಕೆಯಾಗಿದ್ದು, ಸತತವಾಗಿ ಹದಿಮೂರನೇ ಬಾರಿಗೆ ಆಯ್ಕೆಯಾಗುತ್ತಿದೆ. ಕೌಶಲ್ಯದಿಂದ ತಯಾರಿಸಿದ ಮಡಿಕೆ, ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಶ್ರೀಗಂಧದ ಚಿಕಣಿ (ಮಿನಿಯೇಚರ್ಸ್ ಅಥವಾ ಕಿರು ಮಾದರಿ ವಸ್ತುಗಳು), ಕೈಮಗ್ಗದ ಸೀರೆಗಳು, ಕೈಯಿಂದಲೇ ವಿಶಿಷ್ಠ ಕಲಾಕೃತಿಗಳೂ ಒಳಗೊಂಡಂತೆ 16 ಕರಕುಶಲ ವಸ್ತುಗಳು ಭೌಗೋಳಿಕ ಸೂಚಿ ಸಂಕೇತದ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂದೇ ಕರೆಯಲಾಗುತ್ತದೆ.

ಸ್ವಾತಂತ್ರ್ಯ ಹೋರಾಟಗಾರರು, ಅಭಿನೇತ್ರಿ., ಸಮಾಜ ಸೇವಕರು, ಕಲಾ ಉತ್ತೇಜಕರೂ ಆಗಿದ್ದ ರಾಜ್ಯದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ನಶಿಸಿಹೋಗುತ್ತಿದ್ದ ಪಾರಂಪಾರಿಕ ಕರಕುಶಲ ವಸ್ತುಗಳ ತಯಾರಿಕಾ ಕಲೆಯನ್ನು ಉಳಿಸಲು ಪ್ರಮುಖ ಪಾತ್ರ ವಹಿಸಿದ್ದರು. ಸ್ತಬ್ದಕಿತ್ರದ ಕೇಂದ್ರಬಿಂದು ಅವರೇ ಆಗಿದ್ದಾರೆ.

ಏನೇನಿದೆ?

ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಆನೆಯ ಕಲಾಕೃತಿ ಹಾಗೂ ಕೆಳಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರಣವಿದೆ. ಜೊತೆಗೆ, ಗಂಜೀಫಾ ಕಲಾಕೃತಿಗಳಿವೆ. ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ. ಅದರ ಇಕ್ಕೆಲೆಗಳಲ್ಲಿ ಕರಾವಳಿಯ ವೈಶಿಷ್ಠ್ಯವನ್ನು ಬಿಂಬಿಸುವ ಭೂತಾರಾಧನೆಯ ಮುಖವಾಡ ಹೊತ್ತ ಲೋಹದ ಕಲಾಕೃತಿಗಳಿವೆ. ಹೂಜಿಯ ಹಿಂಬದಿಯಲ್ಲಿ ಬಿದರಿ ಕಲೆ ಬಳಸಿ ಸಿದ್ದಪಡಿಸಿರುವ ನವಿಲುಗಳಿವೆ. ಮಧ್ಯ ಭಾಗದ ಹಿಂಬಂದಿಯಲ್ಲಿ ಕಿನ್ನಾಳದ ವೈಶಿಷ್ಠಪೂರ್ಣ ಕಲೆಯಲ್ಲಿ ಮೇಳೈಸಿದ ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿ ಕಂಗೊಳಿಸುತ್ತಿದೆ. ಆಂಜನೇಯ ಸ್ವಾಮಿಯ ಮೂರ್ತಿಯ ಅಕ್ಕ-ಪಕ್ಕದಲ್ಲಿ ಚೆನ್ನಪಟ್ಟಣದ ಬೊಂಬೆಗಳು, ಮೆರುಗೆಣ್ಣೆಯ ಆಟಿಕೆಗಳು, ನವಲಗುಂದ ಧರಿ ( ಜಮಖಾನೆ ), ಶ್ರೀಗಂಧ ಮರದ ಕೆತ್ತನೆಯ ಹಾಗೂ ಮಣ್ಣಿನ ಕಲಾಕೃತಿಗಳಿವೆ. ಸ್ತಬ್ದಚಿತ್ರದ ಕೊನೆಯಲ್ಲಿ ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಿದ ಮಹಾ ಮಾತೆ, ಸ್ವಾತಂತ್ರ್ಯ ಹೋರಾಟಗಾರ್ತಿ, ಕಮಲಾದೇವಿ ಚಟ್ಟೋಪಾದ್ಯಾಯ ಗಂಧದ ಪೆಟ್ಟಿಗೆ, ನವಿಲಿನಾಕಾರದ ದೀಪದ ಕಲಶಗಳು, ಸಂಡೂರಿನ ಬಾಳೆ ನಾರಿನ ಚೀಲಗಳು...ಹೀಗೆ ವಿವಿಧ ಕರಕುಶಲ ವಸ್ತುಗಳನ್ನು ಬಾಗಿನ ರೂಪದಲ್ಲಿ ನೀಡುತ್ತಿರುವ ದೃಶ್ಯಾವಳಿಯ ದೊಡ್ಡ ಪ್ರತಿಮೆ ಇದೆ.

ಅದೇ ಭಾಗದಲ್ಲಿ ಕರ್ನಾಟಕದ ಕೈಮಗ್ಗದ ಹಿರಿಮೆಯ ಇಳಕಲ್ ಕಸೂತಿ ಸೀರೆಗಳು, ಮೊಳಕಾಲ್ಮೋರು ಸೀರೆಗಳು ಹಾಗೂ ಮೈಸೂರು ರೇಷ್ಮೆ ಸೀರೆಗಳು, ಕಿನ್ನಾಳ ಕಲೆಯಲ್ಲಿ ತಯಾರಿಸಿದ ಬಾಲೆಯರ ಕಲಾಕೃತಿಗಳು, ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಬೆತ್ತ, ಬಿದಿರು, ಕಾಡುಬಳ್ಳಿಗಳು ಹಾಗೂ ತಾಟಿನಿಂಗು ಮರದ ಎಲೆಯಿಂದ ತಯಾರಿಸಿದ ಬಗೆ ಬಗೆಯ ಬುಟ್ಟಿಗಳೂ ಕೂಡಾ ಸ್ತಬ್ದಚಿತ್ರಕ್ಕೆ ವಿಶೇಷ ಮೆರುಗನ್ನು ನೀಡಿದೆ.

ಸ್ತಬ್ದಚಿತ್ರದ ಹಿಂದೆ..!

ಸ್ತಬ್ದಚಿತ್ರ ನಿರ್ಮಾಣ ಕಾರ್ಯದಲ್ಲಿ ಹೆಸರಾಂತ ಕಲಾ ನಿರ್ದೇಶಕ ಶಶಿಧರ್ ಅಡಪ ನೇತೃತ್ವದ ಪ್ರತಿರೂಪಿ ಸಂಸ್ಥೆಯ ಒಂದು ನೂರಕ್ಕೂ ಹೆಚ್ಚು ಕಲಾವಿದರು, ಸುಪ್ರಸಿದ್ಧ ಸಂಗೀತ ನಿರ್ದೇಶಕ ಪ್ರವೀಣ್ ದಯಾನಂದ ರಾವ್ ಮತ್ತು ತಂಡ ಹಾಗೂ ಜಾನಪದ ತಜ್ಞ ಡಾ ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾ ಕೇಂದ್ರದ ತಂಡವೂ ಶ್ರಮಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ..ಪಿ.ಎಸ್.‌ ಹರ್ಷ ಅಗತ್ಯ ಸಲಹೆ, ನಿರ್ದೇಶನ ನೀಡಿದ್ದಾರೆ.

ಸುವರ್ಣ ವರ್ಷ ಸಂಭ್ರಮ

ರಾಷ್ಟ್ರದ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಸುಸಂದರ್ಭದಲ್ಲಿ ಸ್ತಬ್ದಚಿತ್ರ ಪ್ರದರ್ಶನದಲ್ಲಿ ವಿಶಾಲ ಮೈಸೂರು ರಾಜ್ಯ ( ಕರ್ನಾಟಕ ರಾಜ್ಯವು ) ಪಾಲ್ಗೊಳ್ಳಲು ಮೊದಲು ಪ್ರಾರಂಭಿಸಿದ್ದು 1972 ರಲ್ಲಿ. ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸ್ ಈ ಜವಾಬ್ದಾರಿಯನ್ನು ಅಂದಿನ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ವಹಿಸಿದ್ದರು. ಅಂದಿನಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಸರ್ಕಾರದ ಪರವಾಗಿ ಸ್ತಬ್ದಚಿತ್ರ ನಿರ್ಮಾಣ ಹಾಗೂ ಪ್ರದರ್ಶನದ ಕಾರ್ಯವನ್ನು ನಿರ್ವಹಿಸಿದೆ. ಇದೀಗ ಭಾರತ ಸ್ವಾತಂತ್ರ್ಯದ ಅಮೃತ ವರ್ಷ ಮಹೋತ್ಸವ ವರ್ಷದಲ್ಲಿ ನವದೆಹಲಿಯಲ್ಲಿನ ಗಣರಾಜ್ಯೋತ್ಸವ ದಿನಾಚರಣೆಯ ಸಂಭ್ರಮದಲ್ಲಿ ಕರ್ನಾಟಕದ ಪಾಲ್ಗೊಳ್ಳುವಿಕೆ 50 ನೇ ವರ್ಷ ವರ್ಷದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net