

ಮುಂಬೈ: ಕರ್ನಾಟಕ ಆಕ್ರಮಿತ ಕೆಲಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂದು ಮಹಾರಾಷ್ಟದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಈ ಮಾತಿನ ಮೂಲಕ ಎರಡು ರಾಜ್ಯಗಳ ಗಡಿ ವಿವಾದವನ್ನು ಮತ್ತೆ ಕೆದಕುವ ಕೆಲಸ ಮಾಡಿದ್ದಾರೆ.
ಮರಾಠಾ ಹುತಾತ್ಮರ ದಿನವಾದ ನಿನ್ನೆ (ಜ.17) ಟ್ವೀಟ್ ಮಾಡಿದ್ದು, ''ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ಕರ್ನಾಟಕಕ್ಕೆ ಸೇರ್ಪಡೆಯಾಗಿರುವ ಪ್ರದೇಶಗಳನ್ನು ಮರಳಿ ಪಡೆಯುವುದೇ ಮರಾಠಾ ಹುತಾತ್ಮರಿಗೆ ನಾವು ಸಲ್ಲಿಸುವ ನಿಜವಾದ ಗೌರವ,'' ಎಂದು ಹೇಳಿದ್ದಾರೆ. ಬಹುಸಂಖ್ಯೆಯಲ್ಲಿ ಮರಾಠಿ ಭಾಷೆಯನ್ನು ಮಾತನಾಡುವ ಹಾಗೂ ಮಾರಾಠಿ ಸಂಸ್ಕೃತಿಯನ್ನು ಒಳಗೊಂಡಿರುವ ಕೆಲವು ಪ್ರದೇಶವನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದು ಗಡಿ ವಿವಾದಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಬೆಳಗಾವಿ, ಕಾರವಾರ, ನಿಪ್ಪಾಣಿ ಪ್ರದೇಶದಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತ ಜನರು ಮಾರಾಠಿ ಭಾಷೆಯನ್ನು ಮಾತನಾಡುತ್ತಾರೆ ಎಂದು ತಿಳಿಸುವ ಮೂಲಕ ಈ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಅಲ್ಲಿನ ಸರ್ಕಾರ ಸಿದ್ಧತೆ ನಡೆಸಿದಂತಿದೆ.
ಮರಾಠಾ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಹಾಗೂ ಇತರ ಪ್ರದೇಶಗಳು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು. ಈ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದೂ ಠಾಕ್ರೆ ವಿವರಿಸಿದ್ದಾರೆ.
ಕರ್ನಾಟಕದ ಬೆಳಗಾವಿಯ ಒಳಗೊಂಡಂತೆ ಕೆಲವು ಪ್ರದೇಶಗಳು ಹಿಂದೆ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದು, ಇದೀಗ ಕರ್ನಾಟಕದ ಭೂಭಾಗದಲ್ಲಿದೆ ಎಂಬ ವಾದವಿದ್ದು, ಈ ಕುರಿತಾದ ಗಡಿ ವಿವಾದ ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್ ನ ವಿಚಾರಣೆಯಲ್ಲಿದೆ.
ಬೆಳಗಾವಿ ಹಾಗೂ ಇತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಿ 1956 ರಲ್ಲಿ ನಡೆದ ಹೋರಾಟದಲ್ಲಿ ಮಡಿದವರ ಗೌರವಾರ್ಥವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತೀ ವರ್ಷ ಜನವರಿ 17ನ್ನು ಹುತಾತ್ಮರ ದಿನವನ್ನಾಗಿ ಆಚರಿಸುತ್ತದೆ.
ಬೆಳಗಾವಿಯ ಒಳಗೊಂಡಂತೆ ಕೆಲವು ಪ್ರದೇಶಗಳು ಹಿಂದೆ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದು ಇದೀಗ ಕರ್ನಾಟಕದ ಭೂಭಾಗದಲ್ಲಿದೆ ಎಂಬ ವಾದವಿದ್ದು ಈ ಕುರಿತಾದ ಗಡಿ ವಿವಾದ ಹಲವು ವರ್ಷಗಳಿಂದ ಸುಪ್ರಿಂ ಕೋರ್ಟ್ ನ ವಿಚಾರಣೆಯಲ್ಲಿದೆ.