

ಉದಯಪುರ (ರಾಜಸ್ಥಾನ್): ಹಿಂದೂ ದೇವರನ್ನು ಹಿಯಾಳಿಸಿದವರ ವಿರುದ್ಧ ಕಿಡಿಕಾರಿ ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿ ಭಾರಿ ವಿವಾದಕ್ಕೆ ಒಳಗಾಗಿದ್ದವರು ಬಿಜೆಪಿ ನಾಯಕಿ ನೂಪುರ್ ಶರ್ಮಾ. ನೂಪುರ್ ಅವರು ಮಾತನಾಡಿದ್ದು ಸರಿ ಎಂದು ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾಲಾಲ್ ಅವರನ್ನು ಕಳೆದ ಜೂನ್ 28ರಂದು ಅವರ ಅಂಗಡಿಯಲ್ಲಿಯೇ ಬರ್ಬರ ಹತ್ಯೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಅವರ ಜತೆಗೇ ಇದ್ದವರು ರಾಜಕುಮಾರ್ ಶರ್ಮಾ (50). ಕನ್ಹಯ್ಯಾಲಾಲ್ ಅವರ ಭೀಕರ ಹತ್ಯೆಯನ್ನು ಕಂಡು ಶಾಕ್ಗೆ ಒಳಗಾಗಿದ್ದ ರಾಜ್‌ಕುಮಾರ್ ಅವರಿಗೆ ನಂತರ ಮೆದುಳಿನ ರಕ್ತಸ್ರಾವ (brain hemorrhage) ಆಗಿತ್ತು. ಇದು ಉಲ್ಬಣಗೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಇಷ್ಟು ತಿಂಗಳವರೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ರಾಜಕುಮಾರ್ ಅವರ ಅನಾರೋಗ್ಯದ ವಿಷಯ ಬೆಳಕಿಗೆ ಬಂದ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜೈಪುರ ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಇಬ್ಬರು ಹಿರಿಯ ವೈದ್ಯರ ತಂಡವನ್ನು ಉದಯಪುರಕ್ಕೆ ಕಳುಹಿಸಿದ್ದರು. ಜೈಪುರ್ನಿಂದ ಉದಯಪುರಕ್ಕೆ ಬಂದ ಪರಿಣತ ವೈದ್ಯರ ತಂಡ ಬಹಳ ಕಷ್ಟಪಟ್ಟು ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.
ಜೈಪುರದ ಎಸ್ಎಂಎಸ್ ಆಸ್ಪತ್ರೆಯ ವೈದ್ಯರ ವಿಶೇಷ ತಂಡಕ್ಕೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಗ್ರೀನ್ ಕಾರಿಡಾರ್ ಅಂದರೆ ಜೀರೊ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ರಾಜ್‌ಕುಮಾರ್ ಶರ್ಮಾ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಈ ಶಸ್ತ್ರಚಿಕಿತ್ಸೆಯ ನಂತರದ 48 ಗಂಟೆಗಳು ಬಹಳ ಸೂಕ್ಷ್ಮವಾಗಿವೆ ಎಂದು ವೈದ್ಯರು ಹೇಳಿದ್ದಾರೆ.
ಈ ಕುರಿತ ರಾಜ್‌ಕುಮಾರ್ ಶರ್ಮಾ ಅವರ ಪತ್ನಿ ಪುಷ್ಪಾ ಶರ್ಮಾ ಮಾತನಾಡಿದ್ದಾರೆ. 'ನನ್ನ ಪತಿ ಕನ್ಹಯ್ಯಾ ಲಾಲ್ ಅಂಗಡಿಯಲ್ಲಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕೊಲೆ ಘಟನೆಯ ನಂತರ ರಾಜಕುಮಾರ್ ತೀವ್ರ ಆಘಾತಕ್ಕೊಳಗಾಗಿದ್ದರು. ಅಂದಿನಿಂದ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಬಂದಿತ್ತು. ಅಂಗಡಿ ಮುಚ್ಚಿದ್ದರಿಂದ ಹಣಕಾಸಿನ ಅಡಚಣೆ ಆಗತೊಡಗಿತ್ತು. ಇದರಿಂದಲೂ ಪತಿ ಹೈರಾಣಾಗಿದ್ದರು. ಇದ್ದಕ್ಕಿದ್ದಂತೆಯೇ ತಲೆಸುತ್ತು ಬಂದು ಬಿದ್ದರು. ಆಸ್ಪತ್ರೆಗೆ ಸಾಗಿಸಿದಾಗ ಬ್ರೈನ್ ಹ್ಯಾಮರೇಜ್ ಆಗಿರುವ ವಿಷಯ ತಿಳಿಯಿತು' ಎಂದು ಪುಷ್ಪಾ ಹೇಳಿದರು. (ಏಜೆನ್ಸೀಸ್)