ನ್ಯಾಯಮೂರ್ತಿಗಳ ಪತ್ನಿಯರಿಗೆ ರೇಪ್​ ಬೆದರಿಕೆ- ವಿವಾದಿತ ಜಡ್ಜ್​ ಕರ್ಣನ್ ಅರೆಸ್ಟ್​

karnan
Published on

ನವದೆಹಲಿ: ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಾಗೂ ನ್ಯಾಯಮೂರ್ತಿಗಳ ಪತ್ನಿಯರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ವಿವಾದಿತ ನಿವೃತ್ತ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ಣನ್ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ ಒಂದು ತಿಂಗಳ ನಂತರ, ಸೈಬರ್ ಅಪರಾಧ ವಿಭಾಗವು ಅವನರನ್ನು ಚೆನ್ನೈ ಉಪನಗರ ಅವಡಿಯಲ್ಲಿ ಬಂಧಿಸಿದೆ.

ನ್ಯಾಯಮೂರ್ತಿಗಳಾದ ಎಂ.ಸತ್ಯನಾರಾಯಣನ್ ಮತ್ತು ಆರ್.ಹೇಮಲತಾ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್ ಸಲ್ಲಿಸಿದ ಪ್ರಕರಣದ ಕುರಿತು ಕರ್ಣನ್ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾದ ಕಾರಣ ಪೊಲೀಸರನ್ನು ಪ್ರಶ್ನಿಸಿದ ದಿನದ ನಂತರ ಈ ಬೆಳವಣಿಗೆ ನಡೆದಿದೆ.

ನ್ಯಾಯಮೂರ್ತಿ ಕರ್ಣನ್ ಅವರ ಹೇಳಿಕೆ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲಾಗಿತ್ತು. ಅದರ ಆಧಾರದ ಮೇಲೆ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವ ಆರೋಪ ಇವರ ಮೇಲಿದೆ.

ಇದನ್ನೂ ಓದಿ: ಅರ್ಚಕರು ಅರೆಬೆತ್ತಲೆಯಲ್ಲಿರ್ತಾರೆ- ಭಕ್ತರಿಗೇಕೆ ಸಂಪ್ರದಾಯದ ಉಡುಗೆ ಎಂದು ಪ್ರಶ್ನಿಸಿದ ಹೋರಾಟಗಾರ್ತಿ!

ಇವರ ವಿರುದ್ಧ ಮದ್ರಾಸ್ ಹೈಕೋರ್ಟ್​ನ ಹಿರಿಯ ವಕೀಲರೊಬ್ಬರು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದರು.

2017ರಲ್ಲಿ ಕೋಲ್ಕತಾ ಹೈಕೋರ್ಟ್​ನ ನ್ಯಾಯಮೂರ್ತಿಯಾಗಿದ್ದಾಗ ನ್ಯಾಯಾಲಯಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಬಹು ವಿವಾದ ಸೃಷ್ಟಿಸಿದ್ದ ನ್ಯಾ.ಕರ್ಣನ್​, ಅದಾದ ಮೇಲೆ ಇಂಥ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸುತ್ತಲೇ ಹೋದವರು. ವರ್ಷಗಳ ಹಿಂದೆ ಇವರ ಬಂಧನಕ್ಕೂ ಕೋರ್ಟ್​ ಆದೇಶ ಹೊರಡಿಸಿತ್ತು.

ಇವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಇತ್ತು. ಈ ಆರೋಪದ ಮೇಲೆ ಬಂಧನಕ್ಕೂ ಒಳಗಾಗಿದ್ದರು. ಸುಪ್ರೀಂಕೋರ್ಟ್ ಆರು ತಿಂಗಳ ಶಿಕ್ಷೆ ವಿಧಿಸಿತ್ತು. ಈ ಪ್ರಕರಣದಲ್ಲಿ ಕರ್ಣನ್ ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ, ಜೈಲುಶಿಕ್ಷೆಗೆ ಗುರಿಯಾಗಲೇಬೇಕು ಎಂದು ತೀರ್ಪು ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net