

ಕೋಲ್ಕತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸಹೊಸ ಘೋಷಣೆ ಮಾಡುತ್ತಿದ್ದಾರೆ. ಇದೀಗ ಬೆಂಗಾಲಿ ಮತದಾರರನ್ನು ಓಲೈಸಿಕೊಳ್ಳಲು ಒಂದು ಘೋಷಣೆ ಮಾಡಿ ಅನ್ಯಭಾಷಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅದೇನೆಂದರೆ, ಬೆಂಗಾಲಿ ಭಾಷೆ ಬರುವವರಿಗೆ ಮಾತ್ರ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದಿದ್ದಾರೆ. ಇಲ್ಲಿಯ ಮಾಲ್ಡಾದಲ್ಲಿ ನಡೆದ ಆಡಳಿತಾತ್ಮಕ ಸಭೆಯೊಂದರಲ್ಲಿ ಮಮತಾ ಈ ರೀತಿಯ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ದೀದಿ, ಪಶ್ಚಿಮ ಬಂಗಾಳದಲ್ಲಿ ಕೆಲವೊಂದು ಸುಧಾರಣೆಗಳನ್ನು ತರಲಾಗುತ್ತಿದೆ. ಈಗ ರಾಜ್ಯದಲ್ಲಿರುವ ಜನತೆಗೆ ಉದ್ಯೋಗವನ್ನು ಒದಗಿಸಬೇಕಾಗುತ್ತದೆ. ಸ್ಥಳೀಯರನ್ನು ಉದ್ಯೋಗದಲ್ಲಿ ನೇಮಿಸಿಕೊಂಡರೆ ಅವರೊಂದಿಗೆ ವ್ಯವಹರಿಸುವುದು ಸುಲಭವಾಗುತ್ತದೆ ಎಂದು ವಿವರಿಸಿದ್ದಾರೆ.
ಇದು ಅನ್ಯಭಾಷಿಕರನ್ನು ಕೆರಳಿಸಿದೆ. ಈ ಮಾತಿನ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಆಮಿಷ ಒಡ್ಡಿ ಚುನಾವಣೆ ಗೆಲ್ಲುವುದು ಸಹಿಸುವುದು ಸಾಧ್ಯವಿಲ್ಲ. ಎಲ್ಲಾ ರಾಜ್ಯಗಳಲ್ಲಿಯೂ ಇದೇ ರೀತಿ ಘೋಷಣೆ ಮಾಡಿದರೆ ಬೆಂಗಾಲಿ ಬರುವವರು ಅನ್ಯರಾಜ್ಯಕ್ಕೆ ಉದ್ಯೋಗಕ್ಕೆ ಹೋಗುವಂತಿಲ್ಲ. ಇದು ನಿಮಗೆ ಸರಿ ಕಾಣಿಸುತ್ತದೆಯಾ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.