‘ಗಂಡ ಕಣೆ ಅಡ್ಜಸ್ಟ್‌ ಮಾಡ್ಕೋ’ ಅಂತಾರೆ... ಇಂಥ ನರಕದ ಬಾಳು ಹೇಗೆ ಬಾಳಲಿ ಮೇಡಂ? ನನಗೆ ಮುಕ್ತಿ ಇದೆಯಾ?

nandondukathe
Published on
ನನ್ನ ಮಕ್ಕಳಿಗೂ ಮದುವೆಯಾಗಿ ಈಗ ಮೊಮ್ಮಕ್ಕಳನ್ನೂ ನೋಡಿರುವ ವಯಸ್ಸು ನಮ್ಮದು. ಆದರೆ ನನ್ನ ಗಂಡನಿಗೆ ಮದುವೆಗೆ ಮೊದಲಿನಿಂದಲೂ ಹೆಂಗಸರ ಸಹವಾಸವಿತ್ತು. ಮದುವೆಯ ನಂತರ ತಿಳಿದರೂ ಸಹಿಸಿಕೊಂಡು ಅವರೊಂದಿಗೆ ಜೀವನ ಮಾಡಿ ಮೂರು ಮಕ್ಕಳನ್ನು ಪಡೆದು, ಅವರೆಲ್ಲರ ಬದುಕು ಒಂದು ದಡ ಮುಟ್ಟುವಂತೆ ನೋಡಿಕೊಂಡೆ. ಇಷ್ಟು ವರ್ಷದ ಬದುಕಿನಲ್ಲಿ ನನಗೆ ಗಂಡನಿಂದ ಸಿಕ್ಕಿದ್ದು ಬರಿ ಕಣ್ಣೀರು ಮತ್ತು ಏಟುಗಳೇ. ವೇಶ್ಯೆಯರ ಸಹವಾಸ ಬೇರೆ. ಈಗ ಮನೆ ಬಿಟ್ಟು ಹೋಗಿದ್ದಾರೆ.

ಇಂಥ ಇವರ ಕೃತ್ಯಕ್ಕೆ ಅವರ ಅಣ್ಣತಮ್ಮಂದಿರು, ಅಕ್ಕತಂಗಿಯರು ಸಂಪೂರ್ಣ ಸಹಕಾರ ಬೇರೆ ಕೊಡುತ್ತಾರೆ. ಅವನು ಗಂಡಸು ಏನಾದರೂ ಮಾಡಿಕೊಳ್ಳಲಿ ಬಿಡು, ಯಾರ ಸಹವಾಸ ಮಾಡಿಕೊಳ್ಳಲಿ ಬಿಡು ಎಂದು ನನಗೆ ಬುದ್ಧಿ ಹೇಳುತ್ತಾರೆ. ಈಗ ನಾನು ಒಂಟಿಯಾಗಿದ್ದೇನೆ. ನನ್ನ ಮುಂದೆ ಹಲವು ಪ್ರಶ್ನೆಗಳು ಬಂದು ಕಾಡುತ್ತವೆ.

1. ಇಂಥವರ ಜೊತೆ ನಾನು ಇನ್ನು ಮುಂದೆಯೂ ಜೀವನ ನಡೆಸ ಬೇಕೇ?

2. 33ವರ್ಷ ಸಂಸಾರ ಮಾಡಿದ್ದಕ್ಕೆ ಅರ್ಥವೇ ಇಲ್ಲವೇ?

3. ಇನ್ನು ಮುಂದೆ ನನ್ನ ಜೀವನ ಏಕಾಂಗಿಯಾಗಿಯೇ ಸಾಗಬೇಕೇ?

4. ಮುಂದೆ ಸಂಸಾರದಲ್ಲಿ (ಅಂದರೆ ಮಗ ಸೊಸೆ ಜೊತೆಗಿನ) ಏರುಪೇರಾದರೆ ನನ್ನ ಗತಿಯೇನು? ಈ ಚಿಂತೆಯಲ್ಲಿ ನಾನು ಬಸವಳಿದು ಹೋಗಿದ್ದೇನೆ. ಏನು ಮಾಡಲಿ?

ಉತ್ತರ: ನಿಮ್ಮ ಗಂಡನ `ಹೆಣ್ಣುಬಾಕತನ’ ಒಂದು ರೀತಿಯ ಮಾನಸಿಕ ದೌರ್ಬಲ್ಯ. 33ವರ್ಷಗಳ ನಿಮ್ಮ ದಾಂಪತ್ಯದಲ್ಲಿ ನಿಮಗೆ ಏಡ್ಸ್, ಎಚ್.ಐ.ವಿ ಮುಂತಾದ ಲೈಂಗಿಕ ರೋಗಗಳನ್ನು ದಯಪಾಲಿಸದೆ ನಿಮ್ಮಿಂದ ದೂರಾಗಿದ್ದಾರಲ್ಲ! ಅದಕ್ಕಾಗಿ ದೇವರಿಗೆ ವಂದಿಸಿ. ನೀವೀಗಾಗಲೇ ಜೀವನದ ಅರ್ಧದಾರಿಯನ್ನು ಕ್ರಮಿಸಿಬಿಟ್ಟಿದ್ದೀರಿ.

ಇನ್ನು ಉಳಿದ ದಾರಿಯನ್ನು ಮಕ್ಕಳು ಮೊಮ್ಮಕ್ಕಳ ಜೊತೆಗೆ ಕ್ರಮಿಸಿದರಾಯಿತಲ್ಲ? ನಿಜ ನಿಮ್ಮ ಭಯ ಸಹಜವಾದದ್ದೇ. ನಿಮ್ಮ ಮಗ ಸೊಸೆ ನಿಮ್ಮನ್ನು ಕಡೆಗಣಿಸಿದರೆ ಅನ್ನುವುದು ಬರಿ ನಿಮ್ಮ ಊಹೆ ಆಗಿರಬಹುದು. ಇದುವರೆವಿಗೂ ನಿಮ್ಮ ಕಷ್ಟಗಳನ್ನು ಮಕ್ಕಳು ಕಂಡೇ ಇದ್ದಾರೆ. ಅವರಿಗೂ ನಿಮ್ಮ ಬಗ್ಗೆ ಅನುಕಂಪವಿದ್ದೇ ಇರುತ್ತದೆ. ಬರಿ ನಕಾರಾತ್ಮಕವಾದದ್ದನ್ನೇ ಯಾಕೆ ಯೋಚಿಸುತ್ತೀರಿ?

ನಿಮ್ಮ ಇಬ್ಬರು ಗಂಡುಮಕ್ಕಳು ನಿಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳಬಹುದಲ್ಲ? ಇನ್ನು ನಿಮ್ಮ ಗಂಡ ವಾಪಸ್ ಬಂದರೆ ಮಾತ್ರ ಅವರೊಂದಿಗೆ ನೀವು ದಾಂಪತ್ಯ ಜೀವನವನ್ನು ಖಂಡಿತಾ ನಡೆಸಬೇಡಿ. ಯಾಕೆಂದರೆ ನಿಮ್ಮ ಆರೋಗ್ಯವೂ ಕೊನೆತನಕ ಚೆನ್ನಾಗಿರಬೇಕಲ್ಲ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net