ನಾಯಿ ಜತೆ ಆಡುವಾಗ ಬಿದ್ದು ಏಟು ಮಾಡಿಕೊಂಡ ಜೋ ಬೈಡೆನ್​- ಮೂಳೆಯಲ್ಲಿ ಸೀಳು

biden
Published on

ವಾಷಿಂಗ್ಟನ್‌: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್​ ಅವರು ತಮ್ಮ ಕಾಲನ್ನು ಉಳುಕಿಸಿಕೊಂಡಿದ್ದಾರೆ. ತಮ್ಮ ನಾಯಿಯ ಜತೆ ಆಟವಾಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು, ಕಾಲಿಗೆ ನೋವು ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ.

ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಪರೀಕ್ಷೆ ಮಾಡಿರುವ ವೈದ್ಯರು ಬಲಗಾಲಿನ ಪಾದದ ಮೂಳೆಯಲ್ಲಿ ಕೂದಲೆಳೆಯಷ್ಟು ಸೀಳು ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ. ಜತೆಗೆ ನಡೆದಾಡಲು

ಅನುಕೂಲವಾಗುವ ಬೂಟುಗಳನ್ನು ಅವರು ಕೆಲವು ವಾರಗಳ ಕಾಲ ಧರಿಸಬೇಕಾಗುತ್ತದೆ ಎಂದು ಸಲಹೆ ಕೊಟ್ಟಿದ್ದಾರೆ.

ಪ್ರಾಣಿ ಪ್ರಿಯರಾಗಿರುವ ಜೋ ಬೈಡೆನ್​ ಇದಾಗಲೇ ಹಲವಾರು ಪ್ರಾಣಿಗಳನ್ನು ಕಾಪಾಡಿದ್ದಾರೆ ಕೂಡ. ಅವರು ಶ್ವಾನಪ್ರೇಮಿ ಕೂಡ ಹೌದು. ತಮ್ಮ ಮನೆಯ ನಾಯಿಗಳ ಜತೆ ಸದಾ ಆಟವಾಡುತ್ತಿರುತ್ತಾರೆ. ಸಾಕು ನಾಯಿಯೊಂದಿಗೆ ಶನಿವಾರ ಆಟವಾಡುವ ವೇಳೆ ಅಕಸ್ಮಾತ್ತಾಗಿ ಜಾರಿ ಬಿದ್ದರು. ಆ ಸಮಯದಲ್ಲಿ ಬಲಗಾಲಿನ ಹಿಮ್ಮಡಿ ಹೊರಳಿ ಮೂಳೆಗೆ ಏಟಾಗಿದೆ.

'ಎಕ್ಸ್‌ರೇ ಮಾಡಿದ ಸಂದರ್ಭದಲ್ಲಿ ಪಾದದ ಮೂಳೆಯಲ್ಲಿ ಸೀಳು ಕಾಣಿಸಿಕೊಂಡಿರುವುದು ಗೊತ್ತಾಗಲಿಲ್ಲ. ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದ ನಂತರ ಗೊತ್ತಾಯಿತು' ಎಂದು ಬೈಡನ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಕೆವಿನ್‌ ಒಕೂನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಬೈಡೆನ್​ ಅವರನ್ನು ಜಾಲತಾಣದಲ್ಲಿ ಟ್ಯಾಗ್​ ಮಾಡಿರುವ ಟ್ರಂಪ್​ ಬೇಗ ಗುಣಮುಖರಾಗಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net