ಜೋ ಬೈಡೆನ್​ ಸಂಪುಟದಲ್ಲಿ ಭಾರತೀಯರ ದಾಖಲೆ- 20 ಮಂದಿ ಸೇರ್ಪಡೆ; 13 ಮಹಿಳೆಯರು

biden
Published on

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಇದೇ 20ರಂದು ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್​ ಸಂಪುಟದಲ್ಲಿ 13 ಮಹಿಳೆಯರೂ ಸೇರಿ 20 ಭಾರತೀಯ ಮೂಲದವರು ಸೇರ್ಪಡೆಗೊಂಡಿದ್ದಾರೆ.

ತಮ್ಮ ಹೊಸ ಆಡಳಿತಕ್ಕೆ ಮತ್ತೆ 20 ಮಂದಿ ಭಾರತ ಮೂಲದ ಅಮೆರಿಕನ್ನ‌ರನ್ನು ಇವರು ಸೇರಿಸಿಕೊಂಡಿರುವುದಾಗಿ ವರದಿಯಾಗಿದೆ. ಪ್ರಮುಖ ಹುದ್ದೆಗಳಿಗೆ ಇವರೆಲ್ಲರನ್ನೂ ನೇಮಿಸಿಕೊಳ್ಳಲಾಗಿದೆ. 20 ಉದ್ಯೋಗಿಗಳಲ್ಲಿ 17 ಮಂದಿ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಈ ಮೂಲಕ ಅಮೆರಿಕದಲ್ಲಿ ವಾಸವಿರುವ ಸಣ್ಣ ಪ್ರಮಾಣದ ಭಾರತೀಯ ಸಮುದಾಯಕ್ಕೆ ನೂತನ ಅಧ್ಯಕ್ಷ ಜೋ ಬೈಡೆನ್ ಉತ್ತಮ ಕೊಡುಗೆ ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 1ರಷ್ಟು ಮಾತ್ರ ಭಾರತ-ಅಮೆರಿಕನ್ನರು ಇದ್ದಾರೆ. ಆದರೆ ಬೈಡೆನ್​ ಅವರ ಸರ್ಕಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ.

ವೈಟ್​ಹೌಸ್ ಕಚೇರಿ ನಿರ್ವಹಣೆ ಮತ್ತು ಬಜೆಟ್​ನ ಸಹಾಯಕ ನಿರ್ದೇಶಕರನ್ನಾಗಿ ನೀರಾ ಟಂಡನ್​ರನ್ನು ಜೋ ಬೈಡೆನ್ ಆಯ್ಕೆಮಾಡಿದ್ದಾರೆ. ಡಾ. ವಿವೇಕ್ ಮೂರ್ತಿಯವರು ಅಮೆರಿಕದ ಸರ್ಜನ್ ಜನರಲ್ ಆಗಿ ಈಗಾಗಲೇ ನೇಮಿಸಲಾಗಿದೆ.

ನ್ಯಾಯಾಂಗ ಇಲಾಖೆಯ ಅಸೋಸಿಯೇಟ್‌ ಅಟಾರ್ನಿ ಜನರಲ್‌ ಆಗಿ ವನೀತಾ ಗುಪ್ತಾ, ವಿದೇಶಾಂಗ ಇಲಾಖೆಯ ನಾಗರಿಕ ಭದ್ರತೆ ಮತ್ತು ಮಾನವ ಹಕ್ಕುಗಳ ವಿಭಾಗಕ್ಕೆ ಉಜ್ರಾ ಝೇಯಾ ನೇಮಕಗೊಂಡಿದ್ದಾರೆ. ಅಮೆರಿಕದ ಮೊದಲ ಮಹಿಳೆಯಾಗಲಿರುವ ಡಾ. ಜಿಲ್‌ ಬೈಡನ್‌ ಅವರಿಗೆ ನೀತಿ ನಿರ್ದೇಶಕರನ್ನಾಗಿ ಮಾಲಾ ಅಡಿಗ ಅವರನ್ನು ನೇಮಕ ಮಾಡಲಾಗಿದೆ. ಗರಿಮಾ ವರ್ಮಾ ಅವರನ್ನು ಡಿಜಿಟಲ್‌ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ, ಕಾಶ್ಮೀರ ಮೂಲದ ಮಹಿಳೆಯೋರ್ವರನ್ನು ಪ್ರಮುಖ ಹುದ್ದೆಗೆ ನೇಮಿಸಲಾಗಿದೆ. ವೈಡ್​ಹೌಸ್​ನ ಡಿಜಿಟಲ್ ಸ್ಟ್ರಾಟರ್ಜಿ ವಿಭಾಗದ ಪಾಲುದಾರಿಕಾ ಮ್ಯಾನೇಜರ್​ ಆಗಿ ಕಾಶ್ಮೀರ ಮೂಲದ ಐಶಾ ಶಾರನ್ನು ನೇಮಿಸಲಾಗಿದೆ. ಯುಎಸ್ ನ್ಯಾಶನಲ್ ಎಕನಾಮಿಕ್ ಕೌನ್ಸಿಲ್​ನ ಸಹಾಯಕ ನಿರ್ದೇಶಕಿಯಾಗಿ ಸಮೀರಾ ಫಾಜಿಲ್ ಆಯ್ಕೆಯಾಗಿದ್ದಾರೆ. ಇದೇ ಕೌನ್ಸಿಲ್​ನಲ್ಲಿ ಭಾರತೀಯ ಮೂಲದ ಇನ್ನೋರ್ವ ಭರತ್ ರಾಮಮೂರ್ತಿಯವರು ಸಹ ಇದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂದಿಸಿದ ಸಮಿತಿಯ ಹಿರಿಯ ಸಲಹೆಗಾರರಾಗಿ ಸೋನಿಯಾ ಅಗರ್​ವಾಲ್​, ಕರೊನಾ ಸೋಂಕಿನ ನಿರ್ವಹಣಾ ತಂಡದ ಪಾಲಿಸಿ ಸಲಹೆಗಾರರಾಗಿ ವಿಧುರ್ ಶರ್ಮಾ, ವೈಟ್​ಹೌಸ್​ ಕೌನ್ಸಿಲ್​ಗಳಿಗೆ ನೇಹಾ ಗುಪ್ತಾ ಮತ್ತು ರೀಮಾ ಶರ್ಮಾ ನೇಮಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net