ಜನ್‌ ಧನ್‌ ಯೋಜನೆಗೆ ಆರು ವರ್ಷ: 43 ಕೋಟಿ ಬಡವರ ಬಾಳಿಗೆ ಬೆಳಕು

jandhan
Published on

ನವದೆಹಲಿ: ಕೇಂದ್ರ ಸರ್ಕಾರದ ಅತಿದೊಡ್ಡ ಯೋಜನೆಗಳಲ್ಲಿ ಒಂದಾದ ಜನ ಧನ್ ಯೋಜನೆ ಇದೀಗ ಆರು ವರ್ಷಗಳನ್ನು ಪೂರೈಸಿದೆ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಆಗಸ್ಟ್‌ನಲ್ಲಿ ಇದನ್ನು ಆರಂಭಿಸಿದ್ದರು.

ಇದೀಗ ಆರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ, ಯೋಜನೆ ಯಶಸ್ಸಿಗೆ ಕಾರಣರಾದ ಜನತೆಯನ್ನು ಅಭಿನಂದಿಸಿದ್ದಾರೆ. ‘ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು. ಕೊನೆಗೂ ಇದು 'ಗೇಮ್ ಚೇಂಜರ್' ಎಂದು ಸಾಬೀತಾಗಿದ್ದು, ಕೋಟ್ಯಂತರ ಬಡವರಿಗೆ ಅನುಕೂಲ ಕಲ್ಪಿಸಿದೆ.

ಅದರಲ್ಲಿಯೂ ಗ್ರಾಮೀಣ ಪ್ರದೇಶದವರು ಮತ್ತು ಮಹಿಳೆಯರಿಗೆ ಈ ಯೋಜನೆಯಿಂದ ಸಾಕಷ್ಟು ನೆರವಾಗಿದೆ’ ಎಂದು ಪ್ರಧಾನಿ ಟ್ವೀಟ‌ನಲ್ಲಿ ಹೇಳಿದ್ದಾರೆ. ಪ್ರಧಾನಮಂತ್ರಿ ಜನ-ಧನ್ ಖಾತೆ ಹೊಂದಿರುವ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಜನ್‌ಧನ್‌ ಕುರಿತು ಅಂಕಿಅಂಶವನ್ನು ಬಿಚ್ಚಿಟ್ಟಿದೆ. ಜನ -ಧನ್ ಯೋಜನೆ ಆರಂಭವಾದ ಆರು ವರ್ಷಗಳಲ್ಲಿ 43 ಕೋಟಿಗೂ ಅಧಿಕ ಬಡಜನರ ಖಾತೆಗೆ ಒಂದು ಲಕ್ಷದ ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು ಠೇವಣಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆ ಇರುವವರಿಗೆ ಮಾಸಿಕ 500 ರೂಪಾಯಿ ಕೇಂದ್ರ ಸರ್ಕಾರ ಹಾಕುತ್ತಿದೆ. ಏಪ್ರಿಲ್ ಮತ್ತು ಜೂನ್ ತಿಂಗಳ ವಂತಿಗೆ ಯಾದ 30705 ಕೋಟಿ ರೂಪಾಯಿ ಜನ್ ಧನ್ ಪಲಾನುಭವಿಗಳ ಖಾತೆಗೆ ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಮುಂದಾಗಿದ್ದು ಈ ಪೈಕಿ 63.6 ರಷ್ಟು ಸೌಲಭ್ಯ ಹೊಂದಿದ್ದಾರೆ ಅದರಲ್ಲಿ 52.2 ರಷ್ಟು ಮಹಿಳೆಯರು ಈ ಸೌಲಭ್ಯ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಮನ್ರೇಗಾ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಜನ್‌ಧನ್‌ ಮಾಹಿತಿ ಹೀಗಿದೆ:

* ಇಲ್ಲಿಯವರೆಗೆ 40.35 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

* ಇದರಲ್ಲಿ ಶೂನ್ಯ ಬ್ಯಾಲೆನ್ಸ್ ಮೂಲಕ ಖಾತೆಯನ್ನು ತೆರೆಯಬಹುದು.

* ಒಟ್ಟು ಬ್ಯಾಂಕ್ ಖಾತೆಗಳಲ್ಲಿ 55. 2 ಪ್ರತಿಶತ ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ.

* ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ 64 ಪ್ರತಿಶತ ಗ್ರಾಮೀಣ ಪ್ರದೇಶಗಳಲ್ಲಿದ್ದರೆ, ಉಳಿದ 36 ಪ್ರತಿಶತ ನಗರಗಳಲ್ಲಿವೆ.

* ಈ ಯೋಜನೆಯಡಿ 2 ಲಕ್ಷ  ಅಪಘಾತ ಉಚಿತ ವಿಮೆ ಲಭ್ಯವಿದೆ.

  • ಜನ ಧನ್ ಖಾತೆಗಳಲ್ಲಿ ಡೆಬಿಟ್ ಕಾರ್ಡ್‌ಗಳನ್ನು ಪಡೆಯುವ ಸೌಲಭ್ಯವೂ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net