

ನವದೆಹಲಿ: ಕಿಯಾ ಮೋಟಾರ್ಸ್ ಇತ್ತೀಚೆಗಷ್ಟೇ ಕಿಯಾ ಸೋನೆಟ್ ಕಾಂಪ್ಯಾಕ್ಟ್ ಎಸ್ಯುವಿಯನ್ನು ಅನಾವರಣಗೊಳಿಸಿದ್ದು, ಅದರ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಅದರ ಮೈಲೇಜ್ ವಿವರ ಇಂದು ಬಹಿರಂಗವಾಗಿದ್ದು, ಮೊದಲ ದಿನವೇ 6,500ಕ್ಕೂ ಹೆಚ್ಚು ಬುಕ್ಕಿಂಗ್ ಆಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಕಿಯಾ ಮೋಟಾರ್ಸ್ ಇಂಡಿಯಾ ತನ್ನ ಸ್ಟೈಲಿಶ್ ಲುಕ್ ಮೂಲಕ ಗಮನಸೆಳೆದಿದೆ. ಅಷ್ಟೇ ಅಲ್ಲ, ಅದರ ಇಂಟೀರಿಯರ್ಸ್ ಮತ್ತು ಪ್ರಯಾಣಿಕ ಸೌಲಭ್ಯಗಳು ಕೂಡ ಆರಾಮದಾಯಕ ಪ್ರಯಾಣದ ಭರವಸೆ ನೀಡಿದ್ದು ನಿರೀಕ್ಷೆಯನ್ನು ಹುಟ್ಟಿಸಿದೆ. ಕಿಯಾ ಸೋನೆಟ್ ಮೂರು ಇಂಜಿನ್ ಆಪ್ಶನ್, ಐದು ಗೇರ್ ಬಾಕ್ಸ್ ಕಾನ್ಫಿಗರೇಷನ್ ಹೊಂಧಿದೆ. ಆರಂಭಿಕ ಹಂತದ ಕಿಯಾ ಸೋನೆಟ್ 83 ಪಿಎಸ್ 1.2 ಲೀಟರ್ ಪೆಟ್ರೋಲ್ ಎಂಜಿನ್, 5 ಸ್ಪೀಡ್ ಮ್ಯಾನುವಲ್ ನಲ್ಲಿ ಲಭ್ಯವಿದೆ. ಇದರ ಫ್ಯೂಯೆಲ್ ಇಕಾನಮಿ ಲೀಟರಿಗೆ 18.4 ಕಿ.ಮೀ.
ಇನ್ನೊಂದು 120 ಪಿಎಸ್, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿದ್ದು, ಎರಡು ಗೇರ್ಬಾಕ್ಸ್ ಚಾಯ್ಸ್ ಜತೆಗೆ 6 ಸ್ಪೀಡ್ ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ನಲ್ಲಿ ಲಭ್ಯವಿದೆ. ಈ ಹಿಂದಿನ ಕಾನ್ಫಿಗರೇಶನ್ನಲ್ಲಿ ಸೋನೆಟ್ ನ ಫ್ಯೂಯೆಲ್ ಇಕಾನಿಮ 18.2 ಕಿ.ಮೀ. ಮಾತ್ರ ಇತ್ತು. ನಂತರ ಇದು 18.3 ಆಗಿತ್ತು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ ಅಧಿವೇಶನದಲ್ಲಿ ಮಂಡನೆ
ಮತ್ತೊಂದು 1.5 ಲೀಟರ್ ಡೀಸೆಲ್ ಇಂಜಿನ್ (110 ಪಿಎಸ್ ಮತ್ತು 115 ಪಿಎಸ್ಗಳಲ್ಲಿ) ಲಭ್ಯವಿದ್ದು, 6 ಸ್ಪೀಡ್ ಮ್ಯಾನುವಲ್ ನಲ್ಲಿ ಫ್ಯುಯೆಲ್ ಎಫಿಷಿಯೆನ್ಸಿ ಪ್ರತಿ ಲೀಟರ್ಗೆ 24.1 ಕಿ.ಮೀ. ಸಿಕ್ಕರೆ, 6- ಸ್ಪೀಡ್ ಟೋರ್ಕ್ ಕನ್ವರ್ಟರ್ ಸೆಟಪ್ನಲ್ಲಿ ಲೀಟರಿಗೆ 19 ಕಿ.ಮೀ. ಕಾರ್ಯಕ್ಷಮತೆ ತೋರುತ್ತದೆ.
ಮಾರುತಿ ವಿತಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಮಹಿಂದ್ರಾ ಎಕ್ಸ್ಯುವಿ300 ಮತ್ತು ಮಾರುಕಟ್ಟೆಗೆ ಬರುತ್ತಿರುವ ಟೊಯೊಟಾ ಅರ್ಬನ್ ಕ್ರೂಸರ್, ನಿಸ್ಸಾನ್ ಮ್ಯಾಗ್ನೈಟ್ಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೋನೆಟ್ ಪರಿಗಣಿಸಲ್ಪಟ್ಟಿದೆ. ಇದರ ಮಾರಾಟ ಮುಂದಿನ ತಿಂಗಳಿಂದ ಆರಂಭವಾಗಲಿದೆ. (ಏಜೆನ್ಸೀಸ್)