ಮಹಿಳೆಯರನ್ನು ಹೊಗಳುವ ಭರದಲ್ಲಿ ಪ್ರಾಣಿಗೆ ಹೋಲಿಸಿ ಪೇಚಿಗೆ ಸಿಲುಕಿರೋ ಇಸ್ರೇಲ್​ ಪ್ರಧಾನಿ!

isrel PM
Published on

ಇಸ್ರೇಲ್​: ಮಾತಿನ ಭರದಲ್ಲಿ ರಾಜಕಾರಣಿಗಳು ಏನೇನೋ ಹೇಳಿ ಪೇಚಿಗೆ ಸಿಲುಕುವುದು ಹೊಸ ವಿಷಯವೇನಲ್ಲ. ಎಲ್ಲವೂ ಸರಿಯಾದರೆ ಆ ಮಾತು ಅಲ್ಲಿಗೇ ಮುಗಿದುಹೋಗುತ್ತದೆ, ಆದರೆ ಒಬ್ಬರು ಅದನ್ನು ಟ್ರೋಲ್​ ಮಾಡಿದರೆ ಸಾಕು, ಸಾಮಾಜಿಕ ಜಾಲತಾಣದಲ್ಲಿ ಆ ಮಾತಿಗೆ ಟೀಕೆ ಮಾಡಿ ಮಾಡಿ ರಾಜಕಾರಣಿಗಳೋ ಅಯ್ಯೋ ಬಿಟ್​ಬಿಡ್ರಪ್ಪಾ ಎಂದು ವಿನಂತಿ ಮಾಡಿಕೊಳ್ಳುವವರೆಗೂ ಹೋಗುತ್ತದೆ.

ಇನ್ನು ಹೆಣ್ಣುಮಕ್ಕಳ ವಿಷಯ ಎಂದರೆ ಸುಮ್ಮನೇನಾ? ಮಾತಿನ ಭರದಲ್ಲಿ ಹೆಣ್ಣುಮಕ್ಕಳಿಗೆ ಅವಮಾನ ಆಗುವ ಹಾಗೆ ಮಾತನಾಡಿದರೆ ಯಾರು ತಾನೇ ಸುಮ್ಮನಿರುತ್ತಾರೆ? ಅಂಥದ್ದೇ ಒಂದು ಮಾತನಾಡಿರುವ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೀಗ ಟ್ರೋಲ್​ನಿಂದಾಗಿ ಗೋಳೋ ಎನ್ನುವಂತಾಗಿದೆ.

ಅಷ್ಟಕ್ಕೂ ಅವರು ಹೇಳಿದ್ದು ಸಾಮಾನ್ಯ ಮಾತಲ್ಲ. ಮಹಿಳೆಯರನ್ನು ಪ್ರಾಣಿಗಳಿಗೆ ಹೋಲಿಸಿದ್ದಾರೆ. ಮನುಷ್ಯರು ಕೂಡ ಒಂದು ಪ್ರಾಣಿಯೇ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆಂದು ಅವರನ್ನು ಪ್ರಾಣಿಗೆ ಹೋಲಿಸಿದರೆ ಹೇಗಿರತ್ತೆ? ಅದರಲ್ಲಿಯೂ ಮಹಿಳೆಯರು ಸುಮ್ಮನೇ ಬಿಟ್ಟಾರೆಯೆ?

ಮಹಿಳೆಯರನ್ನು 'ಹಕ್ಕುಗಳಿರುವ ಪ್ರಾಣಿಗಳು' ಎಂಬ ಅರ್ಥದಲ್ಲಿ ಮಾತನಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮಹಿಳೆಯರ ದೌರ್ಜನ್ಯದ ವಿರೋಧಿ ದಿನ ಎಂದು ಸೋಮವಾರ ಆಚರಿಸಲಾಗಿದೆ. ಆ ಸಂದರ್ಭದಲ್ಲಿ ಮಹಿಳೆಯರ ಪರವಾಗಿ ಮಾತನಾಡಲು ಹೋಗಿರುವ ಪ್ರಧಾನಿ, "ಮಹಿಳೆಯರು ನಿಮಗೆ ಸೇರಿದವರಲ್ಲ, ದೈಹಿಕ ಹಲ್ಲೆ ಮಾಡಲು ಮಹಿಳೆಯರು ಪ್ರಾಣಿಗಳಲ್ಲ" ಎಂದಿದ್ದಾರೆ. ಇಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ.

ಇನ್ನೂ ಮುಂದುವರೆದು ಮಾತನಾಡಿದ ಅವರು, "ಹೊಡೆಯಲು ಮಹಿಳೆಯರು ಪ್ರಾಣಿಗಳಲ್ಲ. ಪ್ರಾಣಿಗಳಿಗೆ ಹೊಡೆಯಬೇಡಿ ಎಂದು ನಾವು ಇತ್ತೀಚೆಗೆ ಹೇಳುತ್ತೇವೆ. ನಮಗೆ ಪ್ರಾಣಿಗಳ ಮೇಲೆ ದಯೆ ಇದೆ. ಮಹಿಳೆಯರು ಹಾಗೂ ಮಕ್ಕಳೂ ಸಹ ಹಕ್ಕುಗಳಿರುವ ಪ್ರಾಣಿಗಳು" ಎಂದುಬಿಟ್ಟಿದ್ದಾರೆ!

ಮಹಿಳೆಯರ ಮೇಲಿನ ಮಮತೆಯಿಂದ, ಅವರ ಮೇಲಿನ ಒಳ್ಳೆಯ ಉದ್ದೇಶದಿಂದಲೇ ಅವರು ಈ ರೀತಿ ಹೇಳಲಿಕ್ಕೆ ಸಾಕು. ಆದರೆ ಈ ಮಾತು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಡಿಯೋ ಹಾಕುವ ಮೂಲಕ ಪ್ರಧಾನಿಯವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದ್ದು, ಮಹಿಳಾ ಸಂಘಟನೆಗಳು ಸಿಡಿದೆದ್ದು ನಿಂತಿವೆ. ಪ್ರಧಾನಿಯವರು ಕ್ಷಮೆಯಾಚಿಸಬೇಕು ಎಂದು ಎಲ್ಲೆಡೆ ಕೂಗು ಕೇಳಿಬಂದಿದ್ದರು, ಪ್ರಧಾನಿ ಸದ್ಯಕ್ಕಂತೂ ಸುಸ್ತಾಗಿ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net