

ಬೆಂಗಳೂರು: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಹಾಗೂ ಕಾಂಗ್ರೆಸ್‌ನ ಶಾಸಕ ಭದ್ರಾವತಿಯ ಬಿ.ಕೆ. ಸಂಗಮೇಶ್ವರ ಅವರ ಸಹೋದರ ಬಿ.ಕೆ. ಶಿವಕುಮಾರ್ ಮಗಳ ವಿವಾಹ ನಾಳೆ ಗೋವಾದಲ್ಲಿ ನಡೆಯಲಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಲಕ್ಷ್ಮಿ ಅವರ ಪುತ್ರ ಮೃಣಾಲ್ ಹಾಗೂ ಬಿ.ಕೆ.ಶಿವಕುಮಾರ್ ಅವರ ಪುತ್ರಿ ಡಾ. ಹಿತಾ ಅವರ ನಿಶ್ಚಿತಾರ್ಥ ನೆರವೇರಿತ್ತು. ಶಿವಮೊಗ್ಗದ ಸರ್ಜಿ ಛತ್ರದಲ್ಲಿ ನಿಶ್ಚಿತಾರ್ಥ ನಡೆದಿತ್ತು.
ಇದೀಗ ಇವರ ವಿವಾಹವನ್ನು ಗೋವಾದಲ್ಲಿ ನಡೆಸಲು ಎರಡೂ ಕುಟುಂಬಗಳು ರೆಡಿಯಾಗಿದ್ದು, ಗೋವಾದತ್ತ ಪ್ರಯಾಣ ಬೆಳೆಸಿದ್ದಾರೆ. ಮದುವೆಯು ಗೋವಾದ ಲೀಲಾಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿದೆ.
ಇದಾಗಲೇ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಕೂಡ ಮಾಲಿನ್ಯದಿಂದ ದೂರವಿರಲು ಗೋವಾದಲ್ಲಿಯೇ ಸದ್ಯ ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರಿಬ್ಬರನ್ನೂ ವಿವಾಹಕ್ಕೆ ಆಮಂತ್ರಿಸಲಾಗಿದೆ.
ರೆಸಾರ್ಟ್ನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆಯಿಂದಲೇ ಮದುವೆ ಸಂಬಂಧಿತ ಸಂಪ್ರದಾಯಗಳು ಆರಂಭವಾಗಿದ್ದು, ಶುಕ್ರವಾರ ಪೂರ್ಣಗೊಳ್ಳಲಿದೆ ಎಂದು ಮೋಹನ್ ರೆಡ್ಡಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಆರತಕ್ಷತೆ ನಡೆಯಲಿದೆ.