'ತಂಗೀ... ಗಂಡನ ಜತೆ ಮನೆಗೆ ಊಟಕ್ಕೆ ಬಾ' ಎಂದು ನವವಿವಾಹಿತರನ್ನು ಕರೆದು ಇಬ್ಬರ ಕೊಲೆ ಮಾಡಿದ ಅಣ್ಣ!

murder
ಕೊಲೆಯಾದ ಮೋಹನ್​, ಶರಣ್ಯ
Published on

ಚೆನ್ನೈ: ಮರ್ಯಾದಾ ಹತ್ಯೆಗಳು ಇತ್ತೀಚಿನ ದಿನಗಳಲ್ಲಿ ಮತ್ತೆ ಸುದ್ದಿ ಮಾಡುತ್ತಿವೆ. ಇದಾಗಲೇ ಕೆಲವು ಕಡೆಗಳಲ್ಲಿ ಅನ್ಯಜಾತಿಯ, ಅನ್ಯ ಕೋಮಿನವರ ಜತೆ ಮದುವೆಯಾಗಿರುವುದಕ್ಕೆ ಹುಡುಗಿ ಇಲ್ಲವೇ ಹುಡುಗನ ಪಾಲಕರು ಕೊಲೆ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿರುವ ನಡುವೆಯೇ ತಮಿಳುನಾಡಿನ ತಂಜಾವೂರಿನ ಕುಂಭಕೋಣಂನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ.

24 ವರ್ಷದ ಶರಣ್ಯ 21 ವರ್ಷದ ಮೋಹನ್ ಕೊಲೆಗೀಡಾದ ದುರ್ದೈವಿಗಳು. ಇವರ ಕೊಲೆ ಮಾಡಿರುವ ಆರೋಪ ಶರಣ್ಯಳ ಅಣ್ಣ ಶಕ್ತಿವೇಲ್ ಮತ್ತು ಆತನ ಸ್ನೇಹಿತ ರಂಜಿತ್ ಮೇಲಿದೆ.

ಆಗಿದ್ದೇನು?

ದಲಿತರಾಗಿರುವ ಶರಣ್ಯ, ಚೆನ್ನೈನ ನಾಯ್ಕರ್ ಸಮುದಾಯದ ಮೋಹನ್​ನನ್ನು ಪ್ರೀತಿಸಿದ್ದೇ ಇಬ್ಬರ ಜೀವಕ್ಕೆ ಮುಳುವಾಗಿ ಹೋಗಿದೆ. ಶರಣ್ಯ ಐದು ತಿಂಗಳ ಹಿಂದೆ ತನ್ನ ತಾಯಿಯನ್ನು ಚೆನ್ನೈನ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದಳು. ಈಕೆಯ ತಾಯಿಯನ್ನು ಅಡ್ಮಿಟ್​ ಮಾಡಿದ ಪಕ್ಕದ ಹಾಸಿಗೆಯಲ್ಲಿ ಇರುವ ರೋಗಿಯನ್ನು ಅಲ್ಲಿಯೇ ಅಟೆಂಡರ್​ ಆಗಿ ಕೆಲಸ ಮಾಡುತ್ತಿದ್ದ ಮೋಹನ್ ನೋಡಿಕೊಳ್ಳುತ್ತಿದ್ದ. ಅಲ್ಲಿಯೇ ಇಬ್ಬರ ನಡುವೆ ಪ್ರೀತಿ ಚಿಗುರಿದೆ.

ಇದೇ ವೇಳೆ ಶರಣ್ಯಳನ್ನು ರಂಜಿತ್​ (ಕೊಲೆ ಆರೋಪಿ) ಜತೆ ಮದುವೆ ಮಾಡಲು ಅಣ್ಣ ಕಾದಿದ್ದ. ಇದನ್ನು ತಿಳಿದ ಈ ಜೋಡಿ ಮನೆಯವರಿಗೆ ತಿಳಿಸದೇ ಮದುವೆಯಾಗಿತ್ತು. ಇದು ಶರಣ್ಯಳ ಅಣ್ಣ ಶಕ್ತಿವೇಲ್ ಹಾಗೂ ಮದುವೆಯಾಗಬೇಕಿದ್ದ ಹುಡುಗ ರಂಜಿತ್​ಗೆ ಸಹಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದರು.

ನೀವಿಬ್ಬರೂ ಮದುವೆಯಾಗಿದ್ದು ನಮಗೆ ಸಂತೋಷವಾಗಿದೆ. ನಮ್ಮಿಂದ ಯಾವುದೇ ತೊಂದರೆ ಇಲ್ಲ ಎಂದು ನಾಟವಾಡಿದ ಶರಣ್ಯಳ ಅಣ್ಣ ಇಬ್ಬರನ್ನೂ ರಾತ್ರಿ ಊಟಕ್ಕೆ ಆಹ್ವಾನಿಸಿದ. ತಮ್ಮ ಮದುವೆಗೆ ಮನೆಯವರು ಒಪ್ಪಿದ್ದನ್ನು ಕೇಳಿ ನೂತನ ದಂಪತಿ ತುಂಬಾ ಖುಷಿಗೊಂಡರು. ಸಾವು ತಮ್ಮನ್ನು ಕರೆಯುತ್ತಿದೆ ಎಂದು ಸ್ವಲ್ಪವೂ ಅವರಿಗೆ ಅರಿವಾಗಲೇ ಇಲ್ಲ.

ಅಣ್ಣ ಖುಷಿಯಿಂದ ಕರೆದದ್ದನ್ನು ನೋಡಿದ ಶರಣ್ಯ ಪತಿಯನ್ನು ಕರೆದುಕೊಂಡು ಅಣ್ಣನ ಮನೆಗೆ ಹೋದಳು. ಇಬ್ಬರಿಗೂ ಊಟ ಬಡಿಸಿದ ಅಣ್ಣ ಊಟ ಆಗುವವರೆಗೆ ಮಾತನಾಡಿದ. ತಾನು ಮಾಡಿಕೊಂಡ ಪ್ಲ್ಯಾನ್​ ಬಗ್ಗೆ ಸ್ವಲ್ಪವೂ ಅನುಮಾನ ಬಾರದಂತೆ ನೋಡಿದ. ನಂತರ ಊಟ ಮಾಡಿದ ಬಳಿಕ ಇಬ್ಬರೂ ಮನೆಗೆ ವಾಪಸಾಗುತ್ತಿದ್ದಾಗ, ಅಣ್ಣ ಮತ್ತು ರಂಜಿತ್​ ಸೇರಿ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿದ್ದಾರೆ!

ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೊಲೆ ಮಾಡಿದ ನಂತರ ಇಬ್ಬರೂ ತಲೆ ಮರೆಸಿಕೊಂಡಿದ್ದರು. ಇಬ್ಬರನ್ನೂ ಹುಡುಕಿ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net