ಬೆನ್ನಿನ ಶಸ್ತ್ರಚಿಕಿತ್ಸೆಯ ನೋವಿನಲ್ಲೇ ಎಸ್​ಎಸ್ಎಲ್​ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ- ಶ್ಲಾಘನೆಗಳ ಮಹಾಪೂರ

exam
Published on

ಕೊಳ್ಳೇಗಾಲ: ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ ಕೊಳ್ಳೇಗಾಲ ತಾಲೂಕಿನ ಹೊಸ ಮಾಲಂಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಶ್ವೇತಾ. ಈಕೆಯ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತಪಡಿಸಿರುವ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಅವರು ಶ್ವೇತಾಳ ಮನೆಗೆ ಧಾವಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಸುರೇಶ್​ ಕುಮಾರ್​ ಜತೆ ಸ್ಥಳೀಯ ಶಾಸಕ ಎನ್​. ಮಹೇಶ್​ ಕೂಡ ಶ್ವೇತಾಳ ಮನೆಗೆ ಭೇಟಿ ಕೊಟ್ಟಿದ್ದು, ಬಾಲಕಿಯ ಕಾರ್ಯವನ್ನು ಬಹುವಾಗಿ ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪಾಲಕರೊಂದಿಗೆ ಮಾತನಾಡಿದ ಸಚಿವರು, ಶಸ್ತ್ರ ಚಿಕಿತ್ಸೆಯಾಗಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾದ ಬಗ್ಗೆ ಕಾರಣ ಕೇಳಿದರು.

ಅದಕ್ಕೆ ಪಾಲಕರು, ಮಗಳು ಓದಿನಲ್ಲಿ ಸದಾ ಮುಂದು. ಆದರೆ ತಿಂಗಳ ಹಿಂದೆ ಬೆನ್ನು ನೋವಿನ ಕಾರಣಕ್ಕೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಆರೋಗ್ಯ ಸ್ಥಿರವಾಗುವಷ್ಟರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಾಯಿತು. ಪರೀಕ್ಷೆ ಬರೆಯಲು ಮಗಳು ಉತ್ಸುಕತೆ ತೋರಿದ ಕಾರಣ ಟಗರಪುರ ಗ್ರಾಮದ ಜ್ಞಾನ ಭಾರತಿ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲಾಯಿತು.



ಈ ವೇಳೆ ಪರೀಕ್ಷೆ ಬರೆಯಲು ಆರಂಭದಲ್ಲಿ ಸ್ವಲ್ಪ ಕಷ್ಟ ಅನುಭವಿಸಿದರಾದರೂ ಒಂದು ಗಂಟೆ ಬಳಿಕ ಚೇತರಿಸಿಕೊಂಡು ಯಶಸ್ವಿಯಾಗಿ ಪರೀಕ್ಷೆ ಬರೆದಳು ಎಂದು ತಿಳಿಸಿದರು. ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ವೈದ್ಯರ ಸೂಕ್ತ ಸಲಹೆ ಮತ್ತು ಔಷಧಗಳನ್ನು ಪಡೆದು ಸಂಪೂರ್ಣವಾಗಿ ಆರೋಗ್ಯ ಸುಧಾರಿಸಿಕೊಂಡು ಮುಂದಿನ ವಿದ್ಯಾಭ್ಯಾಸದ ಕಡೆಗೆ ಮುಖ ಮಾಡುವಂತೆ ವಿದ್ಯಾರ್ಥಿನಿಗೆ ಸಲಹೆ ನೀಡಿದರು. ಈ ವೇಳೆ ಬಿಇಒ ಚಂದ್ರಪಾಟೀಲ್ ಸೇರಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net