

ಭೋಪಾಲ್: ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ʼಐಟಂʼ ಎಂದು ಕರೆದಿದ್ದು, ಈಗ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ.
ಕಾಂಗ್ರೆಸ್ನಿಂದ ಗ್ವಾಲಿಯರ್ನ ಡಾಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಇಮರ್ತಿ ದೇವಿ ಸದ್ಯ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಇಂದು ಪ್ರಚಾರ ನಡೆಸಿದ ಕಮಲ್ನಾಥ್ ಇಮರ್ತಿ ದೇವಿಯವರನ್ನು ಲೇವಡಿ ಮಾಡುವ ಮೂಲಕ ಇದೀಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉಪಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್ನಾಥ್ ಸುರೇಶ್ ನಮ್ಮ ಅಭ್ಯರ್ಥಿ. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿರುವವರು. ಆಕೆಯ ಹಾಗೆ ಅಲ್ಲ. ಏನು ಆಕೆಯ ಹೆಸರು? ಎಂದು ಪ್ರಶ್ನಿಸಿದರು. ಅಲ್ಲಿ ನೆರೆದಿದ್ದ ಜನರು ಇಮರ್ತಿದೇವಿ ಎಂದರು.
ಆಗ ಕಮಲ್ನಾಥ್, ನನಗಿಂತ ನಿಮಗೇ ಆಕೆಯ ಹೆಸರು ಚಿರಪರಿಚಿತ. ನೀವು ನನಗೆ ಮೊದಲೇ ಎಚ್ಚರಿಸಬೇಕಿತ್ತು. ಏನ್ ಐಟಂ ಇವಳು ಎಂದಿದ್ದಾರೆ. ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕಮಲ್ನಾಥ್ ವಿರುದ್ಧ ಭಾರಿ ಆಂದೋಲನವೇ ಶುರುವಾಗಿದೆ.
ಇಮರ್ತಿ ದೇವಿ ಹಾಗೂ ಕಮಲ್ ನಾಥ್ ನಡುವೆ ಹಳೇ ರಾಜಕೀಯ ದ್ವೇಷವಿದೆಯೆಂದೇ ಹೇಳಲಾಗುತ್ತಿದೆ. ಇಮರ್ತಿದೇವಿ ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ಕಮಲ್ನಾಥ್ ವಿರುದ್ಧ ಲಂಚದ ಆರೋಪ ಮಾಡಿದ್ದರು. ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದಾಗ ಅವರ ಮಂತ್ರಿಮಂಡಲದಲ್ಲಿ ಸೇರ್ಪಡೆಯಾಗದ ಶಾಸಕರಿಗೆ ಪ್ರತಿ ತಿಂಗಳು ಐದು ಲಕ್ಷ ರೂಪಾಯಿ ಹಣ ಕೊಡುತ್ತಾರೆ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕಮಲ್ನಾಥ್ ಆಕೆ ತನ್ನ ತಪ್ಪುಗಳನ್ನು ಮುಚ್ಚಿಡಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇಮರ್ತಿ ದೇವಿಯೇ ಈ ಹಿಂದೆ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದೀಗ, ನನ್ನ ಮೇಲೆ ಆರೋಪ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದರು. ಇದೀಗ ಐಟಂ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ವಿಶೇಷವೆಂದರೆ ಕಮಲ್ನಾಥ್ ಸರ್ಕಾರದಲ್ಲಿ ಕೂಡ ಇಮರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸುತ್ತಿದ್ದರು. ಏಳು ತಿಂಗಳ ಹಿಂದೆ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಮಲ್ ನಾಥ್ ಸರ್ಕಾರ ಪತನಗೊಂಡಿತ್ತು.