ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ, ಹುರಿಯತ್‌ ಮುಖಂಡ ಗಿಲಾನಿ ನಿಧನ

gilani
Published on

ಶ್ರೀನಗರ: ಕಾಶ್ಮೀರದ ಉಗ್ರಗಾಮಿ ಸಂಘಟನೆಗಳ ಅತ್ಯಂತ ದೊಡ್ಡ ಕೂಟವಾದ ಹುರಿಯತ್ ಕಾನ್ಪರೆನ್ಸ್​ ಮುಖಂಡ, ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೂರು ದಶಕಗಳಿಗೂ ಹೆಚ್ಚಿನ ಕಾಲ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೋರಾಟ ನಡೆಸಿದ್ದರು.

1990ರಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಮುನ್ನಡೆಸಿದ್ದ ಗಿಲಾನಿ, ಹುರಿಯತ್​ನ ಆಜೀವ ಅಧ್ಯಕ್ಷರಾಗಿದ್ದರು. ಸಂಘಟನೆಯಲ್ಲಿರುವ ಪ್ರಸಕ್ತ ಸನ್ನಿವೇಶಗಳಿಂದಾಗಿ ತಾವು ಅಖಿಲ ಭಾರತ ಹುರಿಯತ್ ಕಾನ್ಪರೆನ್ಸ್​ಗೆ 2020ರ ಜೂನ್‌ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು.

ಇವರು ಮೂರು ಬಾರಿ ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2013ರಿಂದ ಹೆಚ್ಚಾಗಿ ಗೃಹಬಂಧನದಲ್ಲಿಯೇ ಇದ್ದ ಅವರ ಆರೋಗ್ಯ ಮೂರು ವರ್ಷಗಳಿಂದ ಹದಗೆಟ್ಟಿತ್ತು. ಹಲವು ಬಾರಿ ಅವರ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿ, ಕಣಿವೆಯಲ್ಲಿ ಅಶಾಂತಿಯ ವಾತಾವರಣ ಕೂಡ ನಿರ್ಮಾಣವಾಗಿತ್ತು. ಹೀಗಾಗಿ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಉಳಿದವರು ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ.

ನೂರಾರು ಕೋಟಿ ರೂಪಾಯಿಗಳ ಒಡೆಯ ಗಿಲಾನಿ ಹಾಗೂ ಅವರ ಮಕ್ಕಳಾದ ನಾಸೀಮ್, ನಯೀಮ್, ಅನಿಷಾ, ಫಾರ್ ಹಾತ್ ಸೇರಿ ಆರು ಜನರ ಮೇಲೆ ಎನ್ಐಎ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಕ್ರಮ ಆಸ್ತಿ ಗಳಿಕೆ, ಪಾಕಿಸ್ತಾನದಿಂದ ಹಣ ಪಡೆದು, ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಕೆ ಮುಂತಾದ ಆರೋಪಗಳ ಕುರಿತ ತನಿಖೆ ಇನ್ನೂ ಜಾರಿಯಲ್ಲಿದೆ.
ಜಮ್ಮು ಮತ್ತು ಕಾಶ್ಮೀರ ಒಂದು ವಿವಾದಿತ ಪ್ರದೇಶ ಮತ್ತು ಅದರ ಮೇಲೆ ಭಾರತದ ನಿಯಂತ್ರಣ ಸಮರ್ಥನೀಯವಲ್ಲ ಎಂದು ಹುರಿಯತ್ ಪ್ರತಿಪಾದಿಸುತ್ತಾ ಬಂದಿದೆ. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಗಿಲಾನಿ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net