

ಪುಣೆ: ಕೆಲವೊಂದು ಸಾಯುವುದಕ್ಕೆ ಕಾರಣವೇ ಬೇಕಾಗುವುದಿಲ್ಲ. ಎಷ್ಟೊಂದು ಕ್ಷುಲ್ಲಕ ಕಾರಣಕ್ಕೆ ಕೆಲವರು ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಇದು ಕೂಡ ಅಂಥದ್ದೇ ಒಂದು ಪ್ರಕರಣ. ನಡೆದಿರುವುದು ಪುಣೆಯಲ್ಲಿ.
ಗಂಡ ಪ್ರೀತಿಯಿಂದ ಪತ್ನಿಗೆಂದು ತಂದುಕೊಂಡ ಪಾನಿಪುರಿಯಿಂದ ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದು. ಆಗಿದ್ದೇನೆಂದರೆ, ತನಗೆ ತಿಳಿಸದೇ ಪತಿ ಪಾನಿಪುರಿ ತಂದಿರುವುದು ಪತ್ನಿಯನ್ನು ಸಿಟ್ಟಿಗೇಳುವಂತೆ ಮಾಡಿದ್ದು, ಜಗಳವಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೀಗೆ ಆತ್ಮಹತ್ಯೆ ಮಾಡಿಕೊಂಡಿರುವವರು ಪ್ರತಿಕ್ಷಾ ಸರ್ವಾಡೆ ಎಂಬ 23 ವರ್ಷದ ಮಹಿಳೆ. ಈಕೆ 2019 ರಲ್ಲಿ ಗಹಿನಿನಾಥ್ ಅವರನ್ನು ವಿವಾಹವಾಗಿದ್ದರು. ಮೊದಲಿನಿಂದಲೂ ದಂಪತಿ ನಡುವೆ ಜಗಳವಾಗುತ್ತಲೇ ಇತ್ತು. ಆದರೆ ಈಗ ಪಾನಿಪುರಿ ವಿಷಯದಿಂದ ಸಾವಿನ ಹಾದಿ ತುಳಿಯುವಂತಾಗಿದೆ. ಇದರಿಂದಾಗಿ ಅವರ 18 ತಿಂಗಳ ಮಗುವೀಗ ಅನಾಥವಾಗಿದೆ.
ಆಗಿದ್ದೇನು? ಗಹಿನಿನಾಥ್ ಕಚೇರಿಯಿಂದ ಬರುವಾಗ ಪಾನಿಪುರಿ ಪಾರ್ಸೆಲ್ ತಂದಿದ್ದರು. ಆದರೆ ಇದು ಆಕೆಗೆ ಗೊತ್ತಿರಲಿಲ್ಲ. ಪತಿಗಾಗಿ ಆಕೆ ತಿಂಡಿ ರೆಡಿ ಮಾಡಿ ಇಟ್ಟಿದ್ದರು. ಮೊದಲೇ ಗೊತ್ತಿದ್ದರೆ ತಾನು ತಿಂಡಿ ರೆಡಿ ಮಾಡಿ ಇಡುತ್ತಿರಲಿಲ್ಲ ಎಂದು ಆಕೆಯ ಬೇಸರ. ಇದೇ ದಂಪತಿ ನಡುವೆ ಜಗಳಕ್ಕೆ ತಿರುಗಿದೆ.
ಇದೇ ಸಿಟ್ಟಿನಿಂದ ಪಾನಿಪುರಿಯನ್ನು ಮುಟ್ಟದ ಆಕೆ ಮರುದಿನ ಬೆಳಗ್ಗೆ ಗಂಡ ಕಚೇರಿಗೆ ಹೋಗುವಾಗಲೂ ತಿಂಡಿ ಮಾಡಿಕೊಟ್ಟಿರಲಿಲ್ಲ. ಇದರಿಂದ ಗಂಡ ತಿಂಡಿಯಿಲ್ಲದೇ ಮನೆಬಿಟ್ಟಿದ್ದಾರೆ. ಅವರು ಮನೆಗೆ ಬರುವಷ್ಟರಲ್ಲಿ ಪತ್ನಿ ವಿಷ ಸೇವಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ. ಈಗ ಪ್ರತಿಕ್ಷಾಳ ಪಾಲಕರು ಅಳಿಯನ ವಿರುದ್ಧ ದೂರು ದಾಖಲು ಮಾಡಿದ್ದು, ತನಿಖೆ ನಡೆಯುತ್ತಿದೆ.