VIDEO: ಪ್ರಬಲ ಭೂಕಂಪದ ಮಾಹಿತಿ ಸಚಿವರು ನೀಡುತ್ತಿರುವಾಗಲೇ ಅಲ್ಲಾಡಿದ ಭೂಮಿ!

bhookampa
Published on

ಕ್ರೊಯೇಷಿಯಾ: ಮಧ್ಯ ಕ್ರೊಯೇಷಿಯಾದಲ್ಲಿ ಕಳೆದೆರಡು ದಿನಗಳಿಂದ ಭಾರಿ ಭೂಕಂಪ ಸಂಭವಿಸುತ್ತಿದೆ. 140 ವರ್ಷಗಳಲ್ಲಿಯೇ ಕಂಡ ಭಯಾನಕ ಭೂಕಂಪ ಇದು ಎನ್ನಲಾಗಿದೆ.

ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಕೆಲ ಕಟ್ಟಡಗಳು ಕುಸಿದು ಬಿದ್ದಿದ್ದು, ಈಗಾಗಲೇ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಟ್ಟಡಗಳು ಕುಸಿದಿದ್ದು, ಆಸ್ತಿಪಾಸ್ತಿಗೆ ಅಪಾರ ನಷ್ಟವಾಗಿದೆ. ನಗರದ ಆಗ್ನೇಯ ಭಾಗದಲ್ಲಿನ ಪೇಟ್ರಿಂಜಾ ಎಂಬಲ್ಲಿ ಭೂಕಂಪದಿಂದ ಹಾನಿ ಸಂಭವಿಸಿದೆ. ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದು, ಸಾವಿನ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ. 2020ರಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ಮೊದಲ ದಿನ 5.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಭೀಕರ ಪರಿಣಾಮದಿಂದ ಕಂಗೆಟ್ಟ ನಡುವೆಯೇ ಮರುದಿನ ಮತ್ತೊಮ್ಮೆ 6.3 ತೀವ್ರತೆಯ ಭೂಕಂಪನವಾಗಿದೆ. ನೆರೆ ರಾಷ್ಟ್ರಗಳಾದ ಸರ್ಬಿಯಾ, ಬೋಸ್ನಿಯಾ ಹಾಗೂ ದಕ್ಷಿಣ ಆಸ್ಟ್ರಿಯಾದಲ್ಲೂ ಭೂಕಂಪಿಸಿರುವುದಾಗಿ ತಿಳಿದುಬಂದಿದೆ.

ಸ್ಲೋವಿನಿಯಾದ ಪರಮಾಣು ಕೇಂದ್ರವನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಕುರಿತು ಜಾಗ್ರೆಬ್​ ಪ್ರದೇಶದ ಸಚಿವರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು.

ಭೂಕಂಪದಿಂದ ಸಂಭವಿಸಿರುವ ಅನಾಹುತದ ಕುರಿತು ಅವರು ವಿವರಣೆ ನೀಡುತ್ತಿದ್ದರು. ಮಾಧ್ಯಮದವರೆಲ್ಲರೂ ಸುತ್ತಲೂ ನೆರೆದಿದ್ದರು. ಇದೇ ಸಮಯದಲ್ಲಿ ಎಲ್ಲರೂ ನಿಂತಿದ್ದ ಭೂಮಿ ಅದುರಿ ಹೋಗಿದೆ. ಇದ್ದಕ್ಕಿದ್ದಂತೆಯೇ ಭೂಮಿ ಅಲ್ಲಾಡಲು ಶುರು ಮಾಡಿದ್ದರಿಂದ ಮೇಲೆ ಇದ್ದವರು ಪುಟಿಪುಟಿದು ಹಾರಿದ್ದಾರೆ.

ತಕ್ಷಣ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಇದರ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಭೂಕಂಪದ ಭಯಾನಕತೆಯನ್ನು ತೆರೆದಿಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net