

ರಾಯಚೂರು: ಪೆಟ್ರೋಲ್, ಡೀಸೆಲ್ ಬದಲು ನೀರಿನ ಮೂಲಕ ವಾಹನಗಳನ್ನು ಚಲಾಯಿಸುವಂಥ ಪ್ರಯೋಗಗಳನ್ನು ಕೆಲವರು ಮಾಡುತ್ತಿದ್ದಾರೆ. ಇದು ಬೇರೆಯ ಮಾತು. ಆದರೆ ರಾಯಚೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಡೀಸೆಲ್ ಬದಲು ನೀರನ್ನೇ ಹಾಕಿರುವ ಘಟನೆ ಬೆಳಕಿಗೆ ಬಂದಿದೆ!
ರಾಯಚೂರಿನ ಮಸ್ಕಿಯ ಕನಕವೃತ್ತದಲ್ಲಿನ ಸೂಪರ್ ಫಿಲ್ಲಿಂಗ್ ಸ್ಟೇಷನ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಇಲ್ಲಿ ಡೀಸೆಲ್ ತುಂಬಿಸಿಕೊಂಡಿದ್ದ ಲಾರಿ, ಟ್ರಕ್ಗಳು ಹಾಗೂ ಕೆಲ ವಾಹನಗಳು ರಸ್ತೆಯ ಮಧ್ಯೆಯೇ ಕೆಟ್ಟುನಿಂತ ನಂತರ ವಿಷಯ ತಿಳಿದುಬಂದಿದೆ.
ಎರಡು ಕಾರುಗಳು, ಮೂರು ಟ್ರ್ಯಾಕ್ಟರ್ ಮತ್ತು ಮೂರು ಲಾರಿಗಳು ಕೆಟ್ಟು ನಿಂತು ಹೋಗಿವೆ. ನಂತರ ಪರಿಶೀಲನೆ ಮಾಡಿದಾಗ ಪೆಟ್ರೋಲ್ ಬಂಕ್ನಲ್ಲಿ ಹಾಕಿರುವುದು ಡೀಸೆಲ್ ಅಲ್ಲ, ಬದಲಿಗೆ ನೀರು ಎಂದು ತಿಳಿದುಬಂದಿದೆ.
ವಾಹನಗಳ ಮಾಲೀಕರು ತಮ್ಮ ವಾಹನ ಪರೀಕ್ಷೆ ಮಾಡಿಸಿದ ಸಮಯದಲ್ಲಿ ಪೆಟ್ರೋಲ್ ಟ್ಯಾಂಕ್ನಲ್ಲಿ ನೀರು ತುಂಬಿರುವುದು ತಿಳಿದಿದೆ. ಕೂಡಲೇ ಪೆಟ್ರೋಲ್ ಬಂಕ್ಗೆ ಧಾವಿಸಿರುವ ವಾಹನಗಳ ಮಾಲೀಕರು ಅಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರಲ್ಲಿ ದೂರು ದಾಖಲು ಮಾಡಲಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಪೆಟ್ರೋಲ್ ಬಂಕ್ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಾಹನಗಳ ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.