

ಜಮ್ಮು: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಸೋದರಳಿಯ ಮುಬಾಶಿರ್ ಆಜಾದ್ ಇಂದು ಬಿಜೆಪಿ ಸೇರಿದ್ದಾರೆ. ಇವರು ಗುಲಾಂ ನಬಿ ಆಜಾದ್ ಅವರ ಸೋದರ ಸಂಬಂಧಿ ಲಿಯಾಕತ್ ಅಲಿ ಅವರ ಪುತ್ರ.
ಜಮ್ಮುವಿನ ತ್ರಿಕೂಟ ನಗರದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಅವರು ಸೇರ್ಪಡೆಗೊಂಡರು. ತಾವು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಒಳಜಗಳದಲ್ಲಿ ಮುಳುಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲಸ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತನಾಗಿ ಬಿಜೆಪಿ ಸೇರಿರುವೆ ಎಂದು ಹೇಳಿದ್ದಾರೆ.
ಚೆನಾಬ್ ಕಣಿವೆ ಪ್ರದೇಶದ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಿಂದ ಹೆಚ್ಚಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಲು ಇದು ಮುನ್ನಡಿ ಬರೆದಿದೆ, ಇದೊಂದು ತಿರುವು ಆಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮತ್ತು ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಜನಸಾಮಾನ್ಯರ ಭಾವನೆಗಳನ್ನು ಘಾಸಿಗೊಳಿಸಿದೆ. ನಮ್ಮ ಅಂಕಲ್ ಅವರನ್ನು ಕಾಂಗ್ರೆಸ್ ಅಗೌರವದಿಂದ ನಡೆಸಿಕೊಂಡಿದೆ ಎಂದು ಇದೇ ವೇಳೆ ಮುಬಾಶಿರ್ ಆರೋಪಿಸಿದ್ದಾರೆ.
ಮುಬಾಶಿರ್ ಮತ್ತು ಅವರ ಬೆಂಬಲಿಗರನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಶಾಸಕ ದಲೀಪ್ ಸಿಂಗ್ ಪರಿಹಾರ್ ಸೇರಿದಂತೆ ಇತರ ಹಿರಿಯ ನಾಯಕರು ಪಕ್ಷಕ್ಕೆ ಸ್ವಾಗತಿಸಿದರು.