

ಬೋಸ್ಟನ್( ಅಮೆರಿಕ): ಚಂದ್ರನಿಂದ ಸಂಗ್ರಹಿಸಲಾಗಿರುವ ಧೂಳು ಹಾಗೂ ಧೂಳಿನೊಂದಿಗೆ ಬಿಟ್ಟ ಜಿರಳೆ ಇವುಗಳ ಹಿಂದೆ ಈಗ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಬಿದ್ದಿದೆ. ಇವೆರಡನ್ನೂ ತಮಗೆ ನೀಡುವಂತೆ ಬೋಸ್ಟನ್ ಮೂಲದ ಆರ್ಆರ್ ಎಂಬ ಹರಾಜು ಕಂಪೆನಿಗೆ ತಿಳಿಸಿದೆ.
ಏನಿದು ಚಂದ್ರನ ಧೂಳು? ಯಾವಾಗ ತಂದದ್ದು? ಜಿರಳೆ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
1969ರಲ್ಲಿ ನಾಸಾ ಅಪೊಲೊ 11 ಮಿಷನ್ ಚಂದ್ರನ ಅಂಗಳಕ್ಕೆ ಇಳಿಸಿತ್ತು. ಅಪೊಲೊ 11 ಮಿಷನ್ ಚಂದ್ರನ ಅಂಗಳದಿಂದ 47 ಪೌಂಡ್‌ಗಳಿಗಿಂತ ಹೆಚ್ಚು (21.3 ಕಿಲೋಗ್ರಾಂಗಳು) ಪ್ರಮಾಣದ ಕಲ್ಲು ಮತ್ತು ಮಣ್ಣನ್ನು ಭೂಮಿಗೆ ತೆಗೆದುಕೊಂಡು ಬಂದಿತ್ತು. ಅಲ್ಲಿಂದ ತಂದ ಕಲ್ಲು ಮತ್ತು ಮಣ್ಣಿನಲ್ಲಿ ಜೀವಿಗಳು ಇವೆಯಾ ಎಂಬುದನ್ನು ಪರೀಕ್ಷಿಸಲು ಹಾಗೂ ಆ ಮಣ್ಣಲ್ಲಿ ಜೀವಿಗಳು ಬದುಕುಳಿಯುತ್ತವಾ ಎಂಬುದನ್ನು ಕಂಡುಕೊಳ್ಳುವ ಉದ್ದೇಶದಿಂದ ಕೆಲವು ಕೀಟಗಳು, ಮೀನುಗಳು ಮತ್ತು ಇತರ ಸಣ್ಣ ಜೀವಿಗಳನ್ನು ಚಂದ್ರನಿಂದ ತಂದ ಮಣ್ಣಲ್ಲಿ ಬಿಡಲಾಗಿತ್ತು. ಚಂದ್ರನ ಧೂಳನ್ನು ಮೂರು ಜಿರಳೆಗಳಿಗೆ ತಿನ್ನಿಸಿ ಅವುಗಳನ್ನು ಅಮೆರಿದಕ ಮಿನ್ನೇಸೋಟ ವಿಶ್ವವಿದ್ಯಾಲಯಕ್ಕೆ ಅಧ್ಯಯನ ನಡೆಸಲು ತರಲಾಗಿತ್ತು.
ಈ ಧೂಳು ಮತ್ತು ಮೂರು ಜಿರಳೆಯ ಶವಗಳನ್ನು ಬೋಸ್ಟನ್ ಮೂಲದ ಆರ್ಆರ್ ಹರಾಜು ಸಂಸ್ಥೆ ಹರಾಜು ಮಾಡಲು ಮುಂದಾಗಿದೆ. ಇದನ್ನು ಹರಾಜಿಗೆ ಇಡಲಾಗಿದ್ದು, ಅದು ಸುಮಾರು 400,000 ಡಾಲರ್ಗೆ (ಸುಮಾರು 3.13 ಕೋಟಿ ರೂಪಾಯಿ) ಮಾರಾಟವಾಗುವ ನಿರೀಕ್ಷೆ ಇದೆ.
ಈ ಹರಾಜನ್ನು ಸ್ಥಗಿತಗೊಳಿಸಿ ಚಂದ್ರನ ಧೂಳು ಮತ್ತು ಜಿರಳೆ ಶವಗಳನ್ನು ತಮಗೆ ಕೊಡುವಂತೆ ನಾಸಾ ಕಂಪೆನಿಯನ್ನು ಕೋರಿಕೊಂಡಿದೆ. ಆರ್ಆರ್ ಕಂಪೆನಿಗೆ ನಾಸಾ ಪತ್ರ ಬರೆದಿದ್ದು, ಇದನ್ನು ಹರಾಜು ಹಾಕಬೇಡಿ ಎಂದು ಪತ್ರ ಬರೆದಿದೆ. ಈ ಎಲ್ಲಾ ಅಪೊಲೊ ಮಾದರಿಗಳು ನಾಸಾಕ್ಕೆ ಸೇರಿದ್ದು, ಇಂಥ ಮಾದರಿಗಳನ್ನು ಹರಾಜು ಮಾಡಲು ಯಾರಿಗೂ ಕಾನೂನು ಬದ್ಧವಾಗಿ ಅವಕಾಶವಿಲ್ಲ. ಆದ್ದರಿಂದ ಕೂಡಲೇ ಬಿಡ್ಡಿಂಗ್ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಯೋಗದ ಹಿನ್ನೆಲೆ:
ಚಂದ್ರನಿಂದ ತಂದಿದ್ದ ಧೂಳು ಮತ್ತಿರ ಸಾಮಗ್ರಿಗಳನ್ನು ಕೀಟಶಾಸ್ತ್ರಜ್ಞರಾಗಿದ್ದ ಮರಿಯನ್ ಬ್ರೂಕ್ಸ್ ಅಧ್ಯಯನಕ್ಕೊಳಪಡಿಸಿದ್ದರು. ಮಣ್ಣಲ್ಲಿ ಜೀವಿಗಳು ಬದುಕುತ್ತವೆ ಇಲ್ಲವೇ ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿರಲಿಲ್ಲ. ಆದರೆ ಈ ಅಧ್ಯಯನ ಪೂರ್ಣಗೊಳ್ಳುವ ಮೊದಲೇ ಅಂದರೆ 2007 ರಲ್ಲಿ ಅವರು ಮೃತಪಟ್ಟರು.
ಅವರಿನ್ನೂ ಪ್ರಯೋಗಕ್ಕೆ ಬಳಸಿಕೊಂಡಿದ್ದ ಧೂಳು ಮತ್ತು ಜಿರಳೆಗಳನ್ನು ನಾಸಾಗೆ ಹಿಂತಿರುಗಿಸಿರಲಿಲ್ಲ. ಬದಲಿಗೆ ಅವರ ಮನೆಯಲ್ಲೇ ಈ ಪ್ರಯೋಗದ ಮಾದರಿಗಳನ್ನು ಇಟ್ಟುಕೊಂಡಿದ್ದರು. ಈ ಮಾದರಿಗಳನ್ನು ಬ್ರೂಕ್ಸ್ ಅವರ ಮಗಳು 2010ರಲ್ಲಿ ಮಾರಾಟ ಮಾಡಿದ್ದರು. ಈಗ ಆರ್ಆರ್ ಕಂಪೆನಿ ಮರು ಮಾರಾಟಕ್ಕೆ ಸಿದ್ಧವಾಗಿದೆ.