

ಪಂಧರ್ಪುರ (ಮಹಾರಾಷ್ಟ್ರ): ಸಾರಿ ಭಾರತ್ಮಾತಾ. ನನ್ನನ್ನು ಕ್ಷಮಿಸಿಬಿಡು... ಸೈನ್ಯದ ಸಮವಸ್ತ್ರ ಧರಿಸಿ, ಬಾವುಟ ಹಿಡಿಯುವ ನನ್ನಾಸೆಯನ್ನು ಇಲ್ಲಿಗೇ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಡುತ್ತಿದ್ದೇನೆ. ಬದುಕಿನ ನನ್ನ ದೊಡ್ಡ ಆಸೆಯಾಗಿದ್ದ ಇದನ್ನು ಈಡೇರಿಸದೇ ಸಾಯುವುದಕ್ಕೆ ನನಗೂ ಮನಸ್ಸಿಲ್ಲ, ಆದರೆ ಬೇರೆ ದಾರಿಯಿಲ್ಲ... ನನಗೆ ಬದುಕಲು ಆಗುತ್ತಿಲ್ಲ...
ಹೀಗೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ 17 ವರ್ಷದ ಬಾಲಕಿ. ಮಹಾರಾಷ್ಟ್ರದ ಪಂಧರ್ಪುರದ ನಿವಾಸಿಯಾಗಿರುವ ಈ ಬಾಲಕಿ ಮೂವರು ಪುರುಷರು ನೀಡಿರುವ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಬರೆದಿದ್ದಾಳೆ.
ಮೊದಲಿನಿಂದಲೂ ಸೇನೆಗೆ ಸೇರಬೇಕು ಎನ್ನುವ ಮಹದಾಕಾಂಕ್ಷೆ ಹೊಂದಿದ್ದ ಬಾಲಕಿಗೆ ಸೈನ್ಯದ ಸಮವಸ್ತ್ರ ಧರಿಸಿ, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮಿಂಚುವ ಆಸೆ ಇತ್ತು. ಆದರೆ ಮೂವರು ಕಾಮುಕರು ನೀಡುತ್ತಿದ್ದ ಕಿರುಕುಳದಿಂದ ಆಕೆ ಸಾವಿನ ಹಾದಿ ತುಳಿದಿದ್ದಾಳೆ.
ಮೂವರ ಹೆಸರನ್ನು ಡೆತ್ನೋಟ್ನಲ್ಲಿ ಬರೆದಿರುವ ಬಾಲಕಿ, ಇವರು ನಿರಂತರವಾಗಿ ನನಗೆ ಹಿಂಸೆ ಕೊಡುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಭಾರತೀಯ ಸೇನೆ ಸೇರುವ ಆಸೆಯನ್ನು ಇಲ್ಲಿಗೇ ಮುಗಿಸಿ ಸಾಯುತ್ತಿದ್ದೇನೆ. ಅವರು ನೀಡುವ ಹಿಂಸೆಯನ್ನು ತಾಳಿಕೊಂಡು ಬದುಕಲು ಆಗುತ್ತಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.