ತೆಂಗಿನಕಾಯಿ ಕೀಳಲು 55 ಅಡಿ ಮರವೇರಿದ, ಗಂಟೆ ಕಳೆದರೂ ಏರಿದವನ ಪತ್ತೆಯೇ ಇಲ್ಲ; ಆಗಿದ್ದೇನು?

coconut
Published on

ತಂಜಾವೂರು: ವ್ಯಕ್ತಿಯೊಬ್ಬ ತೆಂಗಿನಕಾಯಿ ಕೀಳಲು 55 ಅಡಿ ಎತ್ತರದ ತೆಂಗಿನ ಮರ ಸರಸರನೆ ಹತ್ತಿಬಿಟ್ಟಿದ್ದಾನೆ. ಮರವನ್ನೇನೋ ಏರಿದ್ದ, ಆದರೆ ಏರಿ ಎಷ್ಟು ಹೊತ್ತಾದರೂ ಕಾಯಿ ಮಾತ್ರ ಕೆಳಕ್ಕೆ ಬೀಳಲೇ ಇಲ್ಲ. ಕೆಳಗೆ ನಿಂತವರಿಗೆ ಭಯವೋ ಭಯ.

ಕರಂತೇಯ ಸರುಕ್ಕೆಯ ವೇಲೂರಿನ ತೆಂಗಿನ ಕಾಯಿ ಕೀಳುವ ಎಕ್ಸ್​ಪರ್ಟ್​ ಎಂ. ಲೋಕನಾಥನ್ ಮರವೇರಿ ಎಲ್ಲರನ್ನೂ ದಿಗಿಲು ಬಡಿಸಿದ್ದ. ಅವನು ಮರವೇರಿದ ಮೇಲೆ ತೆಂಗಿನ ಕಾಯಿ ಹಿಡಿದುಕೊಳ್ಳಲು ಕಾದು ಕುಳಿತವರಿಗೆ ಸುಸ್ತಾಗಿದೆ. ಗಂಟೆಯಾದರೂ ಅವನ ಪತ್ತೆಯೇ ಇಲ್ಲ.

ಕೆಳಗೆ ನಿಂತವರು ಅವನ ಹೆಸರು ಹೇಳಿ ಕೂಗಿದ್ದೇ ಕೂಗಿದ್ದು, ಎಷ್ಟು ಜೋರಾಗಿ ಕರೆದರೂ ಆತನ ಪತ್ತೆಯೇ ಇರಲಿಲ್ಲ. ಹಾಂ. ಹೂಂ ಅದೂ ಹೋಗಲಿ ಎಂದರೆ ಅಲುಗಾಡಿದಂತೆಯೇ ಕಾಣಿಸಲಿಲ್ಲ. ಮರದ ತುದಿಯಲ್ಲಿ ತಟಸ್ಥವಾಗಿದ್ದ.

ಗಾಬರಿಗೊಂಡ ಜನರಿಗೆ ಇಲ್ಲಸಲ್ಲದ ಯೋಚನೆಗಳು ಬಂದಿವೆ. ಆದರೆ ಅಷ್ಟು ಎತ್ತರದ ಮರವೇರಿ ಹೋಗಿ ನೋಡುವವರಾದರೂ ಯಾರು?

ನಂತರ ಏನು ಮಾಡಬೇಕು ಎಂದು ತೋಚದ ಗ್ರಾಮಸ್ಥರು ಕೊನೆಗೆ ಕೊನೆಗೆ ತಾಂಜಾವೂರಿನ ಪಶ್ಚಿಮ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಗ್ನಿ ಶಾಮಕದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಬಂದು ಕರೆದರೂ ಲೋಕನಾಥನ್​ ಸುದ್ದಿಯೇ ಇರಲಿಲ್ಲ. ನಂತರ ಅವರು ಮರಕ್ಕೆ ಸ್ಟೀಲ್ ಏಣಿ ಇಟ್ಟು ಹತ್ತಿದ್ದಾರೆ. ನಂತರ ಸ್ವಾಮಿನಾಥನ್​ನ ಉಸಿರು ಚೆಕ್​ ಮಾಡಿದ್ದಾರೆ. ಆತ ಬದುಕಿದ್ದಾನೆ ಎನ್ನುವುದನ್ನು ದೃಢಪಟ್ಟುಕೊಂಡಿದ್ದಾರೆ. ಆದರೆ ಆತ ಕಣ್ಣುಮುಚ್ಚಿದ್ದ.

ಅಗ್ನಿಶಾಮಕ ಸಿಬ್ಬಂದಿ ನಿಧಾನವಾಗಿ ಆತನನ್ನು ಮುಟ್ಟಿದಾಗ ಗಾಬರಿಯಿಂದ ಲೋಕನಾಥನ್​ ಕಣ್ಣುಬಿಟ್ಟಿದ್ದಾನೆ. ಬೃಹದಾಕಾರದ ಏಣಿ ನೋಡಿ ಕಂಗಾಲಾಗಿಹೋಗಿದ್ದಾನೆ. ಏನಾಯಿತು ಎಂದು ಕೇಳಿದ್ದಾನೆ. ನಂತರ ಸಿಬ್ಬಂದಿ ತಮಗೆ ಏನೂ ಆಗಿಲ್ಲ, ನಿನಗೆ ಏನು ಆಯಿತೆಂದು ಎಲ್ಲರೂ ಗಾಬರಿಪಟ್ಟುಕೊಂಡಿದ್ದರು ಎಂದಿದ್ದಾರೆ.

ಆಗ ಲೋಕನಾಥನ್​, ಅಯ್ಯೋ 55 ಅಡಿ ಮರವೇರಿ ಸಿಕ್ಕಾಪಟ್ಟೆ ಸುಸ್ತಾಗಿ ಹೋಯಿತು. ಅದ್ಯಾವಾಗ ಗಾಢನಿದ್ದೆ ಬಂತೋ ಗೊತ್ತೇ ಇಲ್ಲ. ಇಲ್ಲೇ ಮಲಗಿಬಿಟ್ಟಿದ್ದೆ ಎಂದಿದ್ದಾನೆ.

ಅವನನ್ನು ಕೆಳಕ್ಕೆ ಅಂತೂ ಇಳಿಸಲಾಯಿತು. ಅವನ ವಿಷಯ ಕೇಳಿ ಎಲ್ಲರೂ ನಕ್ಕರೆ, ಪುಣ್ಯ ನಿದ್ದೆಯ ಮಂಪರಿನಲ್ಲಿ ಕೆಳಕ್ಕೆ ಬಿದ್ದಿದ್ದರೆ ತಮ್ಮ ಕಥೆ ಅಷ್ಟೇ ಎಂದು ಮರದ ಮಾಲೀಕ ನಿಟ್ಟುಸಿರುಬಿಟ್ಟಿದ್ದಾನೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಇನ್ನೆಂದೂ ಹೀಗೆ ಮಾಡದಂತೆ ತೆಂಗಿನ ಮರ ಹತ್ತುವಾಗ ಎಚ್ಚರಿಕೆಯಿಂದ ಇರುವಂತೆ ಬುದ್ದಿ ಹೇಳಿ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net